ಜಿಲ್ಲೆ

ಅರಣ್ಯ ಅಭಿವೃದ್ಧಿ ನಿಗಮದ ಸುವರ್ಣ ಮಹೋತ್ಸವಕ್ಕೆ ಚಾಲನೆ: ಧ್ಯೇಯೋದ್ದೇಶ‌ ಬದಲಿಸಿಕೊಳ್ಳಲು ಸಿಎಂ ಸಲಹೆ

ಬೆಂಗಳೂರು: ಒಂದು ಸಂಸ್ಥೆ ಸುವರ್ಣ ಮಹೋತ್ಸವ ಆಚರಿಸುವುದು ಸಾಧನೆಯ ಸಂಕೇತ‌. ಅರಣ್ಯ ಸಂಪತ್ತನ್ನು ನಾಗರಿಕ ಸಮಾಜಕ್ಕೆ ಬಳಸಿಕೊಳ್ಳಲಾಗುತ್ತಿದೆ. ನಿಗಮದ ಆರಂಭದಲ್ಲಿ ಅರಣ್ಯ ವಿಸ್ತೀರ್ಣ ಶೇ.33ಕ್ಕಿಂತ ಹೆಚ್ಚಿತ್ತು. ನಮ್ಮ ಪರಿಸರ ಸಮತೋಲನ ಆಗಬೇಕಾದರೆ ಅರಣ್ಯದ ವಿಸ್ತೀರ್ಣ ಕೂಡ ಹೆಚ್ಚಾಗಬೇಕು. ಹಾಗಾಗಿ ನಿಗಮದಲ್ಲಿ ಬದಲಾವಣೆ ಅತ್ಯಗತ್ಯ. ನೀಲಗಿರಿ, ಅಕೇಶಿಯ ಬಿಟ್ಟು, ಹೊಸ ತಳಿ ಬೆಳೆಯಲು ಚಿಂತನೆ ನಡೆಸಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಅರಣ್ಯ ಅಭಿವೃದ್ಧಿ ನಿಗಮದ ಸುವರ್ಣ ಮಹೋತ್ಸವಕ್ಕೆ ಶನಿವಾರ ಚಾಲನೆ ನೀಡಿದ ಸಿಎಂ, ಹೊಸದಾಗಿ ಹಸಿರು ಬಜೆಟ್ ಮಾಡಲಾಗಿದೆ. ಸರ್ಕಾರದಿಂದ ನೂರು ಕೋಟಿ ರೂ. ನೀಡುತ್ತೇನೆ. ಪರಿಸರಕ್ಕೆ ಬೇಕಾದ ರೀತಿಯಲ್ಲಿ ಕಾರ್ಯಕ್ರಮ ಮಾಡಬೇಕು. ಹಸಿರು ಪ್ರದೇಶ ನಿರ್ಮಾಣಕ್ಕೆ ಹೆಚ್ಚಿನ ಗಮನ ಹರಿಸಬೇಕು. ಸರ್ಕಾರದಿಂದ ಬೆಂಬಲ ಇರುತ್ತೆ ಎಂದರು.

ಅರಣ್ಯ ಸಚಿವ ಉಮೇಶ್ ಕತ್ತಿ, ಕಂದಾಯ ಸಚಿವ ಆರ್.ಅಶೋಕ್, ಸಂಸದ ಪಿ.ಸಿ. ಮೋಹನ್, ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧಾ ಸೇರಿದಂತೆ ಹಲವರು ಇದ್ದರು.