ಹೆಬ್ರಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ನಡೆದ ಶ್ರೀ ಗಣೇಶೋತ್ಸವದ ಸಮಾರೋಪದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಎಚ್. ಜನಾರ್ಧನ್, ಡಾ.ಭಾರ್ಗವಿ ಆರ್ ಐತಾಳ್, ನಿತ್ಯಾನಂದ ಶೆಟ್ಟಿ ಮೊದಲಾದವರಿದ್ದರು 
ಜಿಲ್ಲೆ

ಹೆಬ್ರಿ ಗಣಪಗೆ ಚಿನ್ನ ಲೇಪಿತ ಕಿರೀಟ

ವಿಜಯವಾಣಿ ಸುದ್ದಿಜಾಲ ಹೆಬ್ರಿ

ಹೆಬ್ರಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ನಾಲ್ಕು ದಿನಗಳಿಂದ ನಡೆಯುತ್ತಿದ್ದ 49ನೇ ವರ್ಷದ ಗಣೇಶೋತ್ಸವ ಮಂಗಳವಾರ ಸಂಪನ್ನಗೊಂಡಿತು.

ಧಾರ್ಮಿಕ ಸಭೆ ಅಧ್ಯಕ್ಷತೆ ವಹಿಸಿದ್ದ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಎಚ್.ಜನಾರ್ಧನ್ ಮಾತನಾಡಿ 2025ರ ಗಣೇಶೋತ್ಸವದ ಸುವರ್ಣ ಸಂಭ್ರಮ ಪ್ರಯುಕ್ತ ಗಣಪತಿ ದೇವರಿಗೆ ಚಿನ್ನ ಲೇಪಿತ ಕಿರೀಟ ಸಮರ್ಪಿಸುವ ಆಶಯ ವ್ಯಕ್ತಪಡಿಸಿದರು.

ಹೆಬ್ರಿ ರಾಘವೇಂದ್ರ ಜನರಲ್ ಆಸ್ಪತ್ರೆಯ ಡಾ.ಭಾರ್ಗವಿ ಆರ್ ಐತಾಳ್, ಮೂಡಬಿದರೆಯ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ, ನಿವೃತ್ತ ಉಪನ್ಯಾಸಕ ಶಂಕರ ಮರಾಠೆ ಶುಭಹಾರೈಸಿದರು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು.

ಹೆಬ್ರಿ ಎಚ್.ನಾಗರಾಜ ಜೋಯಿಸ್ ಸಹೋದರರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಮಹಾಪೂಜೆ, ವಿಸರ್ಜನಾ ಪೂಜೆ ಬಳಿಕ ಹೆಬ್ರಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳ್ಳಿಯ ಪ್ರಭಾವಳಿ ಸಹಿತ ಶ್ರೀಗಣಪತಿ ದೇವರ ಪುರಮೆರವಣಿಗೆ, ಶೋಭಾಯಾತ್ರೆ ನಡೆಯಿತು.
ನರೇಂದ್ರ ನಾಯಕ್ ಸ್ವಾಗತಿಸಿದರು. ಕನ್ಯಾನ ಸಂತೋಷ ನಾಯಕ್ ವಂದಿಸಿದರು. ಪ್ರಸಾದ್ ಕುಮಾರ್ ಶೆಟ್ಟಿ ನಿರೂಪಿಸಿದರು.

ಸಾಧಕರಿಗೆ ಸನ್ಮಾನ

ಶೈಕ್ಷಣಿಕ ಸಾಧಕ ಸಹ ಪ್ರಾಧ್ಯಾಪಕ ಡಾ.ವಿದ್ಯಾಧರ ಹೆಗ್ಡೆ, ಹೆಬ್ರಿ ಮೆಸ್ಕಾಂನ ಅಪ್ಪುರಾಜ್, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿಶೇಷ ಸಾಧನೆ ಮಾಡಿದ ವರಂಗದ ಅನುಷಾ ನಾಯಕ್ ಮತ್ತು ಹೆಬ್ರಿ ಮಠದಬೆಟ್ಟಿನ ಶಿಫಾ ಅವರನ್ನು ಸನ್ಮಾನಿಸಲಾಯಿತು.