ಬೆಂಗಳೂರು: ಚಂದ್ರಾಲೇಔಟ್ನ ಮನೆಯೊಂದರಲ್ಲಿ ಸೋಮವಾರ ರಾತ್ರಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡಿದ್ದು, 7 ಮಂದಿ ಗಾಯಗೊಂಡಿದ್ದಾರೆ. ಕುಟುಂಬಸ್ಥರ ಎಚ್ಚರಿಕೆಯ ನಡೆಯಿಂದ ಭಾರೀ ದುರಂತ ತಪ್ಪಿದ್ದು, ನೋಡ ನೋಡುತ್ತಿದ್ದಂತೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಬೆಂಕಿಯ ಕೆನ್ನಾಲಗೆ ಹೊರ ಬಂದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಚಂದ್ರಾಲೇಔಟ್ನ ಅತ್ತಿಗುಪ್ಪೆಯ ನರಸಿಂಹಸ್ವಾಮಿ ದೇವಾಲಯದ ಬಳಿ ರಾಮಕ್ಕ ಸ್ವಂತ ಮನೆ ಹೊಂದಿದ್ದು, ಮೊದಲನೇ ಮಹಡಿಯಲ್ಲಿ ಅನಿತಾ, ರಚನಾ ಜತೆ ವಾಸಿಸುತ್ತಿದ್ದರು. ನೆಲ ಮಹಡಿಯಲ್ಲಿ ಬಸ್ ಚಾಲಕ ಸುಕುಮಾರ್ ಕುಟುಂಬಸ್ಥರ ಜತೆ ಬಾಡಿಗೆಗೆ ನೆಲೆಸಿದ್ದರು. ಸೋಮವಾರ ರಾತ್ರಿ 8.45ರಲ್ಲಿ ಸುಕುಮಾರ್ ಪತ್ನಿ ಹರ್ಷಾ ಅಡುಗೆ ಮನೆಗೆ ಹೋಗಿ ನೋಡಿದಾಗ ಸಿಲಿಂಡರ್ನಿಂದ ಅನಿಲ ಸೋರಿಕೆಯಾಗಿರುವ ವಾಸನೆ ಬಂದಿತ್ತು. ಕೂಡಲೇ ಮನೆಯಲ್ಲಿದ್ದ ಸುಕುಮಾರ್ ಹಾಗೂ ಮಕ್ಕಳಾದ ನವ್ಯಶ್ರೀ ಮತ್ತು ಹೇಮೇಶ್ವರ್ಗೆ ಮಾಹಿತಿ ನೀಡಿ ಎಲ್ಲರೂ ಹೊರಗೆ ಓಡಿ ಬಂದಿದ್ದರು. ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದ ರಾಮಕ್ಕ, ಅನಿತಾ ಹಾಗೂ ರಚನಾ ಸಹ ಏನಾಯಿತೆಂದು ನೆಲ ಮಹಡಿಗೆ ಬಂದು ನೋಡುತ್ತಿದ್ದಂತೆ ದೇವರ ಕೋಣೆಯಲ್ಲಿ ಉರಿಯುತ್ತಿದ್ದ ದೀಪದಿಂದ ಬೆಂಕಿ ಹೊತ್ತಿ ಸಿಲಿಂಡರ್ ಸ್ಫೋಟಗೊಂಡಿದೆ. ಮನೆಯೊಳಗಿದ್ದ ಪೀಠೋಪಕರಣ, ಅಡುಗೆ ಮನೆಯಲ್ಲಿದ್ದ ವಸ್ತುಗಳು ಸುಟ್ಟುಹೋಗಿವೆ.
ಪರಿಣಾಮ ಮನೆಯ ಕಿಟಕಿ ಬಳಿ ನಿಂತಿದ್ದ ಸುಕುಮಾರ್ (48), ಹರ್ಷಾ (41), ನಶ್ರೀ (13), ಹೇಮೇಶ್ವರ್ (7), ರಾಮಕ್ಕ (65), ಅನಿತಾ (31), ರಚನಾ(21) ಅವರ ಮುಖ, ತಲೆ, ಕೈ, ಕಾಲುಗಳಿಗೆ ಬೆಂಕಿ ತಗುಲಿ ಗಾಯಗಳಾಗಿದೆ. ಸ್ಥಳಕ್ಕೆ ಧಾವಿಸಿದ ನೆರೆ-ಹೊರೆಯವರು ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಾಮಕ್ಕ ಸ್ಥಿತಿ ಗಂಭೀರವಾಗಿದ್ದು, ಉಳಿದವರ ದೇಹಕ್ಕೆ ಕಡಿಮೆ ಪ್ರಮಾಣದಲ್ಲಿ ಸುಟ್ಟಗಾಯಗಳಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.