ಜಿಲ್ಲೆ

ಡಿಕೆಶಿ ಮನೆಗೆ ಎಸ್​ಪಿಎಂ ಭೇಟಿ: ಮುಂದಿನ ರಾಜಕೀಯ ನಡೆ ಕುರಿತು ಮಹತ್ವದ ನಿರ್ಧಾರ ಪ್ರಕಟಿಸ್ತಾರಾ ಮುದ್ದಹನುಮೇಗೌಡ?

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಕುಣಿಗಲ್​ ಕ್ಷೇತ್ರ ಭಾರೀ ಕುತೂಹಲ ಮೂಡಿಸಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡರೇ ತನ್ನ ವಿರುದ್ಧ ಷಡ್ಯಂತ್ರ ನಡೆಸಿದರು ಎಂದು ಈಗಾಗಲೇ ಬಹಿರಂಗ ಅಸಮಾಧಾನ ಹೊರಹಾಕಿರುವ ಮಾಜಿ ಸಂಸದ ಎಸ್​ಪಿಎಂ, ಕುಣಿಗಲ್ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪುನರುಚ್ಛರಿಸುತ್ತಲೇ ಇದ್ದಾರೆ. ಇನ್ನು ಹಾಲಿ ಶಾಸಕ ಡಾ.ರಂಗನಾಥ್​ ಅವರೇ ಮುಂದಿನ ಚುನಾವಣೆಗೂ ಕಾಂಗ್ರೆಸ್ ಅಭ್ಯರ್ಥಿ ಎಂದು ಸಂಸದ ಡಿ.ಕೆ.ಸುರೇಶ್​ ಈಗಾಗಲೇ ಘೋಷಿಸಿದ್ದಾರೆ. ಅತ್ತ ಮುದ್ದಹನುಮೇಗೌಡರು ಬಿಜೆಪಿಗೆ ಹೋಗ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇನ್ನೂ ಕೆಲವರು ಕಾಂಗ್ರೆಸ್​ ತೊರೆಯಲ್ಲ, ಅವರು ಬಂಡಾಯ ಅಭ್ಯರ್ಥಿ ಆಗ್ತಾರೆ ಎಂದೂ ಹೇಳ್ತಿದ್ದಾರೆ.

ಇಷ್ಟೆಲ್ಲಾ ಬೆಳವಣಿಗೆ ನಡುವೆ ಇಂದು(ಗುರುವಾರ) ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರನ್ನು ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮುದ್ದಹನುಮೇಗೌಡರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಉಪಸ್ಥಿತರಿದ್ದರು. ಕಾಂಗ್ರೆಸ್​ನಿಂದ ಅಂತರ ಕಾಯ್ದುಕೊಂಡಿದ್ದ ಎಸ್​ಪಿಎಂ, ಡಿಕೆಶಿ ಭೇಟಿ ಬಳಿಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ. ಬಳಿಕ ತಮ್ಮ ಮುಂದಿನ ರಾಜಕೀಯ ಕುರಿತು ನಿರ್ಧಾರ ಪ್ರಕಟಿಸಲಿದ್ದಾರೆ ಎನ್ನಲಾಗುತ್ತಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರ ಭಾರಿ ಸುದ್ದಿಯಲ್ಲಿತ್ತು. ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರು ಸ್ಪರ್ಧಿಸಿದ್ದರು. ಎಸ್​.ಪಿ.ಮುದ್ದಹನುಮೇಗೌಡರಿಗೆ ಕೊನೇ ಕ್ಷಣದಲ್ಲಿ ಕಾಂಗ್ರೆಸ್​ನಿಂದ ಟಿಕೆಟ್​ ಕೈತಪ್ಪಿತ್ತು. ಅಂತಿಮವಾಗಿ ಸ್ಪರ್ಧೆಯಿಂದ ಕಾಂಗ್ರೆಸ್ ಹಿಂದೆ ಸರಿದಿತ್ತು.

ಈ ಕುರಿತು ಈ ಹಿಂದೆ ಹಲವು ಬಾರಿ ಎಸ್​ಪಿಎಂ ಆಕ್ರೋಶ ಹೊರ ಹಾಕಿದ್ದನ್ನು ನೆನಪಿಸಿಕೊಳ್ಳಬಹುದು. ತುಮಕೂರು ಜಿಲ್ಲೆಯ ಜನರು, ಮುಖಂಡರು ನನ್ನ ಸರ್ಧೆ ಬಯಸಿದ್ದರು. ಆದರೆ, ನನ್ನನ್ನು ಎರಡನೇ ಸಲ ಎಂಪಿ ಆಗದಂತೆ ತಡೆದ ಮಹಾನುಭಾವರ ಬಗ್ಗೆ ನನ್ನ ಬಳಿ ಮಾಹಿತಿಯಿದೆ. ದೇಶದಲ್ಲಿ ಎಲ್ಲ ಲೋಕಸಭಾ ಸದಸ್ಯರಿಗೆ ಟಿಕೆಟ್​ ಕೊಟ್ಟು ನನಗೊಬ್ಬನಿಗೆ ಟಿಕೆಟ್​ ಕೊಡದೆ ಸ್ಪಧಿರ್ಸಲು ಅವಕಾಶ ನೀಡಲಿಲ್ಲ, ನನಗೇಕೆ ಟಿಕೆಟ್​ ನೀಡಲಿಲ್ಲ ಎಂದು ಕೇಂದ್ರದ ನಾಯಕರನ್ನು ಪ್ರಶ್ನಿಸಿದೆ, ಯಾರೊಬ್ಬರೂ ಉತ್ತರ ನೀಡಲು ಸಾಧ್ಯವಾಗಿಲ್ಲ. ಇದಕ್ಕೆಲ್ಲಾ ಕಾರಣ ಡಿಕೆ ಬ್ರದರ್ಸ್​ ಎಂದು ಹಲವು ಭಾರಿ ಎಸ್​ಪಿಎಂ ಪರೋಕ್ಷವಾಗಿ ಆಕ್ರೋಶ ಹೊರಹಾಕಿದ್ದರು. ಕಾಂಗ್ರೆಸ್​ ಹೈಕಮಾಂಡ್​ಗೆ ಹತ್ತಿರವಾಗಿದ್ದ ನನ್ನನ್ನು ಎರಡನೇ ಸಲ ಸಂಸತ್​ ಪ್ರವೇಶಿಸದಂತೆ ದೊಡ್ಡ ಷಡ್ಯಂತ್ರ ಮಾಡಿದ ಮಹಾನುಭಾವರ ಮಾಹಿತಿ ನನ್ನ ಬಳಿಯಿದೆ. ಸಮಯ ಬಂದಾಗ ಬಹಿರಂಗಪಡಿಸುತ್ತೇನೆ ಎಂದಿದ್ದ ಅವರು, ಎಂಪಿ ಟಿಕೆಟ್​ ಕಿತ್ತುಕೊಂಡು ನನ್ನನ್ನು ರಾಜಕೀಯವಾಗಿ ಮುಗಿಸಲು ನಡೆಸಿರುವ ಕುತಂತ್ರಕ್ಕೆ ಕುಣಿಗಲ್​ ಜನರೇ ಉತ್ತರ ನೀಡುತ್ತಾರೆ ಎಂದು ಹಲವು ಬಾರಿ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು.
ನನ್ನ ಹುಟ್ಟೂರು, ನಾನು ವಿದ್ಯಾಭ್ಯಾಸ ಮಾಡಿದ ಊರು, ಎರಡು ಬಾರಿ ಶಾಸಕನಾದ ಕ್ಷೇತ್ರ ಕುಣಿಗಲ್​. ಈ ಕ್ಷೇತ್ರದಲ್ಲೇ ನಾನು ಸ್ಪರ್ಧಿಸುವೆ. ಕುಣಿಗಲ್ ಕ್ಷೇತ್ರದ ಜನರೂ ನನ್ನ ಸ್ಪರ್ಧೆಗೆ ಇಂಗಿತ ವ್ಯಕ್ತಪಡಿಸಿದ್ದಾರೆ. ಹಾಲಿ ಶಾಸಕ ಡಾ.ರಂಗನಾಥ್​ ಅವರು ಕೆಪಿಸಿಸಿ ಅಧ್ಯಕ್ಷರ ಸಂಬಂಧಿ. ಅವರನ್ನು ಬಿಟ್ಟು ನನಗೆ ಟಿಕೆಟ್ ಕೊಡುತ್ತಾರಾ? ಎಂಬ ಪ್ರಶ್ನೆ ಇದೆ. ಆದರೆ, ನಾನು ಹಾಲಿ ಸಂಸದನಾಗಿದ್ದಾಗ ಯಾಕೆ ನನಗೆ ಟಿಕೆಟ್ ತಪ್ಪಿಸಿದ್ರು. ಆಗ ನನ್ನ ರಕ್ಷಣೆಗೆ ಯಾಕೆ ಯಾರೂ ಬಂದಿಲ್ಲ. ಪಕ್ಷದಲ್ಲಿ ಎಲ್ಲಿದೆ ನ್ಯಾಯ? ಕಳೆದ ಬಾರಿಯ 10 ಜನ ಕಾಂಗ್ರೆಸ್ ಸಂಸದರಲ್ಲಿ ನನಗೆ ಮಾತ್ರ ಅನ್ಯಾಯ ಮಾಡಿದ್ರು. ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಮಾಡುವಲ್ಲಿ ಕಾಂಗ್ರೆಸ್ ಪಕ್ಷದಿಂದ ತಪ್ಪಾಗಿದೆ. ಜನರ ಭಾವನೆ ಅರ್ಥಮಾಡಿಕೊಂಡು ಅಭ್ಯರ್ಥಿಗಳನ್ನು ಹಾಕುವಲ್ಲಿ ಕಾಂಗ್ರೆಸ್ ಎಡವಿದೆ. ಪರಿಣಾಮ ರಾಜ್ಯದಲ್ಲಿದ್ದ 10 ಸಂಸದರ ಪೈಕಿ ಈಗ ಒಂದು ಸ್ಥಾನವಷ್ಟೇ ಉಳಿದಿದೆ. ನಾನು ನನ್ನ ಸ್ಥಾನ ತ್ಯಾಗ ಮಾಡುವಾಗ ರಾಜ್ಯಸಭಾ ಸದಸ್ಯರಾಗಿ ಮಾಡೋದಾಗಿ ರಾಹುಲ್ ಗಾಂಧಿ ಹೇಳಿದ್ರು. ಎರಡು ವಿಧಾನ ಪರಿಷತ್ ಸ್ಥಾನ ಬಂತು, ಅದನ್ನೂ‌ ಕೊಟ್ಟಿಲ್ಲ. ನನಗೆ ಪಕ್ಷದಿಂದ ಅನ್ಯಾಯವಾಗಿದೆ. ಕುಣಿಗಲ್ ಕ್ಷೇತ್ರದಿಂದ ಟಿಕೆಟ್ ಸಿಗದೇ ಇದ್ದರೆ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಬಳಿ ಹೋಗುವೆ ಎಂದು ಕೆಲ ತಿಂಗಳ ಹಿಂದೆಯೇ ಎಸ್​ಪಿಎಂ ಹೇಳಿದ್ದರು. ಲೋಕಸಭೆಗೆ ಟಿಕೆಟ್ ಕೈ ತಪ್ಪಿದ್ದರಿಂದ ನನಗೆ ಅಸಮಾಧಾನ ಇದೆ. ಅಸಮಾಧಾನ ಇಲ್ಲ ಅಂದರೆ ಅದು ನನ್ನ ಆತ್ಮ ವಂಚನೆ ಆಗುತ್ತದೆ ಎಂದೂ ಹೇಳಿದ್ದರು.

ಅಷ್ಟೇ ಅಲ್ಲ ಬಿಜೆಪಿಗೆ ಹೋಗುವೆ ಎಂಬುದು ಸುಳ್ಳು, ನಾನು ಕಾಂಗ್ರೆಸ್​ನಲ್ಲೇ ಇರುವೆ. ಕುಣಿಗಲ್​ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸೋದು ಗ್ಯಾರಂಟಿ ಎಂದಿದ್ದರು. ಇದೀಗ ಡಿಕೆಶಿ ಅವರ ಜತೆ ಯಾವ ವಿಚಾರ ಮಾತುಕತೆ ನಡೆಸಿದರು, ಎಸ್​ಪಿಎಂ ಅವರ ಮುಂದಿನ ನಡೆ? ಏನು ಎಂಬುದು ಕ್ಷೇತ್ರದ ಜನರಲ್ಲಿ ಸಹಜವಾಗಿ ಕುತೂಹಲ ಮೂಡಿಸಿದೆ.