ಬೆಂಗಳೂರು: ನರೇಂದ್ರ ಮೋದಿ ಅವರು ದೇಶದ ಆಡಳಿತ ಚುಕ್ಕಾಣಿ ಹಿಡಿದು ಎಂಟು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ದೇಶವ್ಯಾಪಿ ಸಂಭ್ರಮ ಆಚರಿಸಿಕೊಂಡಿದ್ದು, ದೊಡ್ಡ ಪ್ರಮಾಣದ ಜಾಹೀರಾತುಗಳ ಮೂಲಕ ಸಾಧನೆಯನ್ನು ಬಿತ್ತಿದ್ದಾರೆ. ಆದರೆ ವಾಸ್ತವಾಂಶ ಭಿನ್ನವಾಗಿದ್ದು, ಸಂಗ್ರಹಿಸಿದ ಮಾಹಿತಿ ಆಧರಿಸಿ 'ವರುಷ ಎಂಟು ಅವಾಂತರ ನೂರೆಂಟು' ಶೀರ್ಷಿಕೆಯಡಿ ಕಿರುಹೊತ್ತಗೆಯನ್ನು ಹೊರ ತಂದಿದ್ದೇವೆ. ಬಿಜೆಪಿ ಸೇರಿ ರಾಜ್ಯದ ಜನರಿಗೆ ಕಿರುಹೊತ್ತಗೆಯನ್ನು ಹಂಚುವೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಕಿರುಹೊತ್ತಗೆ ಬಿಡುಗಡೆ ಮಾಡಿ ಮಾತನಾಡಿದ ಸಿದ್ದರಾಮಯ್ಯ, ಕಿರುಹೊತ್ತಗೆಯಲ್ಲಿ ಪ್ರಸ್ತಾಪಿಸಿರುವ ಅಂಶಗಳಿಗೆ ಬಿಜೆಪಿಯವರು ಉತ್ತರಿಸಲಿ ಎಂದು ಸವಾಲು ಹಾಕಿದರು. ಇದೇ ಕಾರಣಕ್ಕೆ ಹೈದರಾಬಾದ್ನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯತ್ತಿರುವ ಸಂದರ್ಭದಲ್ಲಿ ಕಿರು ಹೊತ್ತಗೆ ಬಿಡುಗಡೆ ಮಾಡಿರುವೆ ಎಂದರು.
ಮೋದಿ ಸರ್ಕಾರದ ಕೆಟ್ಟ ಆಡಳಿತ, ದೋಷಪೂರಿತ ನೀತಿಗಳು, ಆರ್ಥಿಕ ದುಸ್ಥಿತಿಯಿಂದ ಜನರ ಬದುಕು ದುಸ್ತರವಾಗಿದ್ದು, ಒಕ್ಕೂಟ ವ್ಯವಸ್ಥೆ ಶಿಥಿಲವಾಗಿದೆ. ಈ ಕಹಿಸತ್ಯ ಮರೆಮಾಚಲು ಸುಳ್ಳಿನ ಸಂಭ್ರಮ ಆಚರಿಸಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.
ಸಿದ್ದರಾಮೋತ್ಸವ ಅಲ್ಲ: 75 ವರ್ಷಗಳನ್ನು ಆ.3ಕ್ಕೆ ಪೂರೈಸುತ್ತಿರುವುದು ಜೀವನದಲ್ಲಿ ದೊಡ್ಡ ಮೈಲುಗಲ್ಲು ಎಂಬ ಕಾರಣಕ್ಕೆ ಹಿತೈಷಿಗಳು, ಅಭಿಮಾನಿಗಳು ಸೇರಿ 75ನೇ ಜನ್ಮದಿನ ಆಚರಿಸುತ್ತಿದ್ದು, ವೈಯಕ್ತಿಕವಾಗಿ ನಾನು ಜನ್ಮದಿನ ಆಚರಿಸಿಕೊಂಡಿಲ್ಲ. ಸಿದ್ದರಾಮೋತ್ಸವವಲ್ಲ, ಹೊಟ್ಟೆಕಿಚ್ಚಿನ ಜನರು, ರಾಜಕೀಯ ವೈರಿಗಳ ಹೇಳಿಕೆಗಳಿಗೆ ಮೂರು ಕಾಸಿನ ಕಿಮ್ಮತ್ತಿಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದರು.