ಜಿಲ್ಲೆ

ಕೋಲಾರ ಜಿಲ್ಲಾಡಳಿತ ಭವನದಲ್ಲೇ 2.80 ಲಕ್ಷ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದ ಉಪ ತಹಸೀಲ್ದಾರ್, ಎಫ್​ಡಿಎ!

ಕೋಲಾರ: ಭೂ ಪರಿವರ್ತನೆ ಆದೇಶದ ನಕಲು ಪ್ರತಿ ನೀಡಲು ಲಂಚ ಪಡೆಯುತ್ತಿದ್ದ ಆರೋಪದಲ್ಲಿ ಕೋಲಾರ ಜಿಲ್ಲಾಧಿಕಾರಿ ಕಚೇರಿ ಕಂದಾಯ ಶಾಖೆಯ ಉಪತಹಸೀಲ್ದಾರ್​ ಎಂ.ಪ್ರಭಾಕರನ್​ ಸೇರಿ ಮೂವರು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾರೆ.

ಬೆಂಗಳೂರು ಕಾಮಾಕ್ಷಿಪಾಳ್ಯದ ವ್ಯಕ್ತಿಯೊಬ್ಬರು ಕೋಲಾರ, ಮಾಲೂರು ತಾಲೂಕು ವ್ಯಾಪ್ತಿಯ ವಿವಿಧ ಸರ್ವೇ ನಂಬರ್​ಗಳಲ್ಲಿನ ಜಮೀನುಗಳ ಭೂ ಪರಿವರ್ತನೆ ಆದೇಶದ ನಕಲು ಪ್ರತಿ ಕೋರಿ ಫೆ.4 ಮತ್ತು 22ರಂದು ಜಿಲ್ಲಾಧಿಕಾರಿ ಕಚೇರಿ ಕಂದಾಯ ಶಾಖೆಗೆ 56 ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸಂಬಂಧಿಸಿ ದಾಖಲಾತಿ ನೀಡಲು ಪ್ರತಿ ಅರ್ಜಿಗೆ ತಲಾ 5 ಸಾವಿರ ರೂ.ನಂತೆ ಒಟ್ಟು 2.80 ಲಕ್ಷ ರೂ. ಲಂಚ ಕೊಡುವಂತೆ ಪ್ರಭಾಕರನ್ ಕೇಳಿದ್ದರು.​ ಜಿಲ್ಲಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಜನಾರ್ದನಗೌಡ ಮುಂಗಡವಾಗಿ 10 ಸಾವಿರ ರೂ. ಪಡೆದಿದ್ದರು. ಆದರೆ ಇದೇ ವಿಷಯವಾಗಿ ಅರ್ಜಿದಾರರು ಬೆಂಗಳೂರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಕೊಟ್ಟಿದ್ದರು.

ದೂರು ಆಧರಿಸಿ ಶುಕ್ರವಾರ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು, ಪ್ರಭಾಕರನ್​, ಜನಾರ್ದನಗೌಡ ಹಾಗೂ ಅವರಿಗೆ ನೆರವಾಗಿದ್ದ ಜಿಲ್ಲಾಧಿಕಾರಿ ಕಚೇರಿಯ ಗುತ್ತಿಗೆ ನೌಕರ ಮನೋಜ್​ ಅವರನ್ನು ಲಂಚ ಪಡೆಯುತ್ತಿದ್ದ ಸಂದರ್ಭದಲ್ಲೇ ಜಿಲ್ಲಾಡಳಿತ ಭವನದಲ್ಲಿ ಬಂಧಿಸಿದ್ದಾರೆ. ಆರೋಪಿಗಳಿಂದ ಲಂಚದ ಹಣ ವಶಪಡಿಸಿಕೊಳ್ಳಲಾಗಿದೆ. ಎಸಿಬಿ ಅಧಿಕಾರಿಗಳು ಅಪರ ಜಿಲ್ಲಾಧಿಕಾರಿ ಡಾ.ಸ್ನೇಹಾ ಕಚೇರಿಗೆ ಆಗಮಿಸಿ ವಿಚಾರಣೆ ನಡೆಸಿದ್ದು, ಸಾಮಾಜಿಕ ಜಾಲತಾಣ ಮತ್ತು ಸುದ್ದಿವಾಹಿನಿಗಳಲ್ಲಿ ಅವರನ್ನೇ ವಿಚಾರಣೆ ನಡೆಸಲಾಗುತ್ತಿದೆ ಎಂಬರ್ಥದ ವಿಡಿಯೋಗಳು ಹಾಗೂ ಫೋಟೋಗಳು ಹರಿದಾಡಿದ್ದವು. ಕಚೇರಿ ಸಿಬ್ಬಂದಿಯ ವಿಚಾರಣೆ ಹಿನ್ನೆಲೆಯಲ್ಲಿ ಎಡಿಸಿ ಕಡೆಯವರೆಗೂ ಇದ್ದರೆಂದು ತಿಳಿದುಬಂದಿದೆ.