ತುಮಕೂರು: ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಅವರ 3ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಯಲ್ಲಿ ಸಿದ್ಧಗಂಗಾ ಮಠಕ್ಕೆ ಜ.21 ರಂದು ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸುವರು.
ಶ್ರೀಗಳ ಪುಣ್ಯಸ್ಮರಣೆ ದಿನದಂದು ದಾಸೋಹ ದಿನವನ್ನಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಕರೊನಾ ಹಿನ್ನೆಲೆ ಈ ಭಾರಿ ಸಾರ್ವಜನಿಕ ಕಾರ್ಯಕ್ರಮ ಇರುವುದಿಲ್ಲ. ಅಂದು ಬೆಳಗ್ಗೆ 10ಕ್ಕೆ ಮಠಕ್ಕೆ ಸಿಎಂ ಭೇಟಿ ನೀಡಲಿದ್ದಾರೆ. ಅತ್ಯಂತ ಸರಳವಾಗಿ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಮಠದ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಕರೊನಾ ಹಿನ್ನೆಲೆ ಶ್ರೀಗಳ ಗದ್ದುಗೆ ಪೂಜೆ ಹೊರತುಪಡಿಸಿ ಬೇರೆ ಯಾವುದೇ ಕಾರ್ಯಕ್ರಮ ಇರುವುದಿಲ್ಲ. ಉತ್ಸವ, ಮೆರವಣಿಗೆ, ವೇದಿಕೆ ಕಾರ್ಯಕ್ರಮ ಎಲ್ಲವೂ ರದ್ದು ಮಾಡಲಾಗಿದೆ ಎಂದು ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಹೇಳಿದ್ದಾರೆ.
ಕಾರ್ಯಕ್ರಮ ಮಾಡಿದರೆ ಮಠದ ವಿದ್ಯಾರ್ಥಿಗಳು, ಭಕ್ತರು ಸೇರುತ್ತಾರೆ. ಇದರಿಂದ ಕರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಹಾಗಾಗಿ, ಎಲ್ಲ ಕಾರ್ಯಕ್ರಮ ರದ್ದು ಮಾಡಿದ್ದೇವೆ. ಸಿಎಂ ಮಠಕ್ಕೆ ಬರುತ್ತಾರೆ ಎಂಬ ಮಾಹಿತಿ ಮಾಧ್ಯಮದಿಂದ ತಿಳಿದಿದ್ದೇನೆ. ಸಿಎಂ ಬಂದರೂ ಗದ್ದುಗೆ ದರ್ಶನ ಮಾತ್ರ ಇರಲಿದೆ. ಹೆಚ್ಚಿಗೆ ಜನರು ಸೇರುವಂತಿಲ್ಲ. ಭಕ್ತರು ಸಹಕರಿಸಬೇಕು ಎಂದು ಸಿದ್ದಲಿಂಗ ಶ್ರೀಗಳು ಮನವಿ ಮಾಡಿದ್ದಾರೆ.
ದಾಸೋಹ ವ್ಯವಸ್ಥೆ: ಶ್ರೀಗಳ ಪುಣ್ಯಸ್ಮರಣೆ ಅಂಗವಾಗಿ ಯಾವುದೇ ಧಾರ್ಮಿಕ ಕಾರ್ಯಕ್ರಮಗಳು ಇರುವುದಿಲ್ಲ. ಬದಲಿಗೆ ಶ್ರೀಗಳ ಗದ್ದುಗೆಗೆ ವಿಶೇಷ ಅಲಂಕಾರ, ಪೂಜಾ ಕಾರ್ಯಕ್ರಮ ನೆರವೇರಲಿದೆ. ಮಠಕ್ಕೆ ಬರುವ ಭಕ್ತರಿಗೆ ವಿಶೇಷ ಪ್ರಸಾದ ವ್ಯವಸ್ಥೆ ದಾಸೋಹದಲ್ಲಿರಲಿದೆ.