ಜಿಲ್ಲೆ

ದಸರಾ ಹಬ್ಬದ ಪಾರ್ಟಿಯಲ್ಲಿ ಗೆಳೆಯನಿಂದಲೇ ಕೊಲೆಯಾದ ಯುವಕ

reportermng

ಮಂಗಳೂರು: ದಸರಾ ಹಬ್ಬದ ಪ್ರಯುಕ್ತ ಪಾರ್ಟಿ ಮಾಡುತ್ತಿದ್ದ ವೇಳೆ ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ ಗೆಳೆಯನ ಕೊಲೆಯಲ್ಲಿ ಅಂತ್ಯವಾಗಿದೆ.

ಪಚ್ಚನಾಡಿಯ ಧನುಷ್‌(20) ಮೃತ ದುರ್ದೈವಿ. ಪ್ರಮೀತ್‌, ಜೇಸನ್‌ ಸುರತ್ಕಲ್‌, ಕಾರ್ತಿಕ್‌, ದುರ್ಗೇಶ್‌, ಪ್ರಜ್ವಲ್‌ ಮತ್ತು ಧನುಷ್​ ಸೇರಿ 6 ಜನ ಸ್ನೇಹಿತರು ಹಬ್ಬದ ಹಿನ್ನೆಲೆ ಪಾರ್ಟಿ ಮಾಡಲು ನಿರ್ಧರಿಸಿದ್ದರು. ಅದರಂತೆ ಧನುಷ್​, ನಗರದ ಪಂಪ್‌ವೆಲ್‌ ಬಳಿಯ ವಸತಿ ಗೃಹದಲ್ಲಿ ಶುಕ್ರವಾರ ರೂಂ ಮಾಡಿದ್ದ. ಎಲ್ಲರೂ ಸೇರಿ ಪಾರ್ಟಿಯ ಖುಷಿಯಲ್ಲಿದ್ದರು.

ಪಾರ್ಟಿಯಲ್ಲಿ ಅಂದು ರಾತ್ರಿ ಜೇಸನ್‌ ಸುರತ್ಕಲ್‌ ಹಾಗೂ ಧನುಷ್‌ ನಡುವೆ ಜಗಳವಾಗಿದೆ. ಪರಿಸ್ಥಿತಿ ಕೈಮೀರಿದ್ದು ಜೇಸನ್‌ ತನ್ನಲ್ಲಿದ್ದ ಯಾವುದೋ ಹರಿತ ಆಯುಧದಿಂದ ಧನುಷ್‌ಗೆ ಚುಚ್ಚಿದ್ದಾನೆ. ತೀವ್ರ ಗಾಯಗೊಂಡ ಧನುಷ್​ನನ್ನು ಆಸ್ಪತ್ರೆಗೆ ಕೂಡಲೇ ಕರೆದೊಯ್ದರಾದರೂ ಬದುಕಲಿಲ್ಲ. ನಗರದ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.