ಶಶಿಕುತ್ಯಾಳ ಪುತ್ತೂರು ಗ್ರಾಮಾಂತರ: ಪಾಣಾಜೆ ರಸ್ತೆಯ ನೆಲ್ಲಿತ್ತಿಮಾರು ಎಂಬಲ್ಲಿ ರಸ್ತೆ ಬದಿ ಬೃಹತ್ ಮರವೊಂದು ಅಪಾಯಕಾರಿ ಸ್ಥಿತಿಯಲ್ಲಿದೆ. ಬುಡ ಭಾಗದಲ್ಲಿ ಟೊಳ್ಳಾಗಿ ಅರ್ಧ ಸತ್ತು ಹೋದಂತೆ ಗೋಚರಿಸುತ್ತಿರುವ ಈ ಮರ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಪುತ್ತೂರಿನಿಂದ ಪಾಣಾಜೆ ಮೂಲಕವಾಗಿ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ಪಾಣಾಜೆ ಗ್ರಾಮದ ಆರ್ಲಪದವಿನಿಂದ ಸುಮಾರು ಅರ್ಧ ಕಿ.ಮೀ ದೂರದಲ್ಲಿ ಈ ಅಪಾಯಕಾರಿ ಮರವಿದೆ. ಐತಿಹಾಸಿಕ ಹಿನ್ನಲೆಯಿರುವ ಬಾಂಬ್ರಿಗೆ ಹೋಗುವ ತಿರುವು ರಸ್ತೆ ಸಮೀಪ ಮುಖ್ಯ ರಸ್ತೆ ಬದಿಯಲ್ಲಿ ಈ ಮರ ಬಳ್ಳಿಗಳಿಂದ ಆವೃತ್ತಗೊಂಡಿದೆ. ಮರ ಸತ್ತಂತೆ ಭಾಸವಾಗುತ್ತಿದ್ದರೂ ರಸ್ತೆಗೆ ವಾಲಿ ನಿಂತಿರುವ ಮರದ ಕೊಂಬೆಗಳು ಮಾತ್ರ ಮರ ಜೀವಂತವಾಗಿದೆ.
ಈ ರಸ್ತೆಯಲ್ಲಿ ಖಾಸಗಿ ಬಸ್‌ಗಳ ಸಹಿತ ನೂರಾರು ವಾಹನಗಳು ನಿತ್ಯ ಓಡಾಡುತ್ತಿರುತ್ತವೆ. ಪುತ್ತೂರಿನಿಂದ ಕೇರಳದ ಪೆರ್ಲ, ಅಡ್ಕಸ್ಥಳ, ಅಡ್ಯನಡ್ಕ ಕಡೆಗೆ ತೆರಳುವವರು, ಪಾಣಾಜೆ ಗ್ರಾಮದ ಜನರು ಹಾಗೂ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಮರದ ಪಕ್ಕದಲ್ಲೇ ವಿದ್ಯುತ್ ಲೈನಿದೆ. ಮರ ಯಾವಾಗ ಮುರಿದು ಬೀಳುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ ಈ ಭಾಗದ ಜನ ಆತಂಕದಲ್ಲಿದ್ದಾರೆ.
ಪಾಣಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಬದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸುವಂತೆ ಗ್ರಾಮ ಪಂಚಾಯಿತಿ ಸಭೆಯಲ್ಲಿ ಸದಸ್ಯರು ಆಗ್ರಹಿಸಿದ್ದರು. ಈ ಕುರಿತು ನಿರ್ಣಯ ಕೈಗೊಂಡು ಅರಣ್ಯ ಇಲಾಖೆಗೆ ಬರೆದುಕೊಳ್ಳಲಾಗಿತ್ತು. ಗ್ರಾಮ ಪಂಚಾಯಿತಿ ಮಟ್ಟದ ಪ್ರಾಕೃತಿಕ ವಿಕೋಪ ನಿರ್ವಹಣಾ ಸಮಿತಿ ಸಭೆಯಲ್ಲೂ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳ ತೆರವಿನ ವಿಚಾರ ಪ್ರಸ್ತಾಪವಾಗಿತ್ತು. ಸಭೆಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳ ಕುರಿತು ಪಟ್ಟಿ ಮಾಡಿ, ಆ ಮರಗಳ ತೆರವಿಗಾಗಿ ಅರಣ್ಯ ಇಲಾಖೆಗೆ ಬರೆದುಕೊಳ್ಳಲಾಗಿತ್ತು. ಆದರೆ ಪಂಚಾಯಿತಿಯಲ್ಲಿ ಕೈಗೊಳ್ಳಲಾದ ನಿರ್ಣಯ ಬರೀ ಪುಸ್ತಕದಲ್ಲಿ ಮಾತ್ರ ಉಳಿದುಕೊಂಡಿದ್ದು, ಇಲಾಖೆಗೆ ಕಳುಹಿಸಿದ ಮನವಿಗಳು ಏನಾಗಿದೆಯೋ ಗೊತ್ತಿಲ್ಲ.
ಕಳೆದ ಕೆಲ ದಿನಗಳಿಂದ ಎಡಬಿಡದೆ ಜಡಿ ಮಳೆ ಸುರಿಯುತ್ತಿದೆ. ತಾಲೂಕಿನ ವಿವಿಧ ಕಡೆಗಳಲ್ಲಿ ರಸ್ತೆ ಬದಿಯ ಮರಗಳು ನೆಲಕ್ಕುರುಳಿ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇಲ್ಲಿನ ಮರವೂ ಅಪಾಯಕಾರಿ ಸ್ಥಿತಿಯಲ್ಲಿದ್ದು, ಎಲ್ಲಾದರೂ ವಾಹನಗಳ ಮೇಲೆ, ಇಲ್ಲವೇ ಜನಸಂಚಾರದ ವೇಳೆ ಮುರಿದು ಬಿದ್ದು ಅಪಾಯ ಸಂಭವಿಸಿದರೆ ಅದಕ್ಕೆ ಯಾರು ಹೊಣೆ ಎನ್ನುವುದು ಜನತೆಯ ಪ್ರಶ್ನೆ.
ನೆಲ್ಲಿತ್ತಿಮಾರಿನಲ್ಲಿರುವ ಅಪಾಯಕಾರಿ ಮರ ತೆರವಿನ ವಿಚಾರ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದನೆ ಇಲ್ಲ. ‘ನೀವು ಹೇಳಿದ ಮಾತ್ರಕ್ಕೆ ಮರ ತೆರವುಗೊಳಿಸಲು ಸಾಧ್ಯವಿಲ್ಲ. ನೀವು ಶಾಸಕರಿಗೆ, ಸಹಾಯಕ ಕಮೀಷನರ್‌ಗೆ ಹೇಳಿ ಮಾಡಿಸುವುದಾದರೆ ನಾವೇ ಅವರ ಮೊಬೈಲ್ ನಂಬರ್ ಕೊಡುತ್ತೇವೆ. ನೀವು ಅವರಲ್ಲೇ ಹೇಳಿ’ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳುತ್ತಾರೆ ಎಂದಾದರೆ ಏನರ್ಥ ಎಂದು ಅಲ್ಲಿನ ಜನಪ್ರತಿನಿಧಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಸ್ತೆ ಬದಿಯಲ್ಲಿ 11 ಕೆವಿ ಎಚ್‌ಟಿ ಲೈನ್ ಮತ್ತು ಎಲ್‌ಟಿ ಲೈನ್ ಮೇಲ್ಭಾಗದಲ್ಲಿ ಅಶ್ವತ್ಥ ಮರವೊಂದು ಒಣಗಿ ಅಪಾಯಕಾರಿ ಸ್ಥಿತಿಯಲ್ಲಿ ನಿಂತಿದೆ. ಈ ಕುರಿತು ಅರಣ್ಯ ಇಲಾಖೆ ಮತ್ತು ಮೆಸ್ಕಾಂ ಇಲಾಖೆಗೆ ತಿಳಿಸಲಾಗಿದ್ದರೂ ಈ ತನಕ ತೆರವುಗೊಳಿಸುವ ಕಾರ್ಯ ನಡೆದಿಲ್ಲ. ಮರ ಬಿದ್ದಲ್ಲಿ ಏಳೆಂಟು ವಿದ್ಯುತ್ ಕಂಬಗಳು ಮುರಿದುಬಿದ್ದು ದುರಂತ ಸಂಭವಿಸುವ ಸಾಧ್ಯತೆ ಇದೆ. ಹಾಗಾಗಿ ಈ ಕುರಿತು ಶೀಘ್ರ ಕ್ರಮಕೈಗೊಳ್ಳಬೇಕೆಂದು ಶಾಸಕರನ್ನು ವಿನಂತಿಸಿಕೊಳ್ಳಲಾಗಿದೆ. ಮೈಮುನತುಲ್‌ಮೆಹರಾ, ಪಾಣಾಜೆ ಗ್ರಾಪಂ ಅಧ್ಯಕ್ಷೆಮೈಮುನತುಲ್ಮೆಹರಾ, ಪಾಣಾಜೆ ಗ್ರಾಪಂ ಅಧ್ಯಕ್ಷೆ