ಜಿಲ್ಲೆ

ಬೆಡ್ ಬ್ಲಾಕ್ ದಂಧೆ ಆರೋಪಿ ಜತೆ ಕಾಂಗ್ರೆಸ್​ ನಾಯಕರು! ಫೋಟೋ ವೈರಲ್

ಬೆಂಗಳೂರು: ಆಸ್ಪತ್ರೆಗಳಲ್ಲಿ ಬೆಡ್​, ಆಕ್ಸಿಜನ್​ ಸಿಗದೆ ನಿತ್ಯ ನೂರಾರು ಕರೊನಾ ಸೋಂಕಿತರು ಪ್ರಾಣಬಿಡುತ್ತಿದ್ದಾರೆ. ಇಂತಹ ಸಂಕಷ್ಟ ಕಾಲದಲ್ಲೂ ಬೆಡ್​ ಬ್ಲಾಕಿಂಗ್​ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು, ಈ ಸಂಬಂಧ ನಿನ್ನೆ(ಮಂಗಳವಾರ) ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ನೇತ್ರಾವತಿ(42) ಮತ್ತು ರೋಹಿತ್(32) ಬಂಧಿತರು. ಬೆಡ್​ ಬ್ಲಾಕಿಂಗ್​ ದಂಧೆಯಲ್ಲಿ ಸಿಕ್ಕಿಬಿದ್ದ ಆರೋಪಿ ನೇತ್ರಾವತಿ ಕಾಂಗ್ರೆಸ್ ನಾಯಕರ ಜತೆ ಈ ಹಿಂದೆ ತೆಗೆಸಿಕೊಂಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.

ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್, ಜಯನಗರ ಶಾಸಕಿ ಸೌಮ್ಯಾರೆಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಕಂಡ್ರೆ ಜತೆಗೆ ಆರೋಪಿ ನೇತ್ರಾವತಿ ಇರುವ ಫೋಟೋಗಳು ಜಾಲತಾಣದಲ್ಲಿ ಹರಿದಾಡುತ್ತಿವೆ.

ಬಂಧಿತ ನೇತ್ರಾವತಿ ಮತ್ತು ರೋಹಿತ್ ನೆರೆಮನೆ ನಿವಾಸಿಗಳು. ಬಿಬಿಎಂಪಿ ವಾರ್ ರೂಮಿನಲ್ಲಿ ನೇತ್ರಾವತಿ ಹಲವರೊಂದಿಗೆ ಸಂಪರ್ಕದಲ್ಲಿರುವುದು ಖಚಿತವಾಗಿದೆ. ಈ ದಂಧೆಯ ಹಿಂದೆ ದೊಡ್ಡ ಜಾಲವೇ ಇರುವುದು ಸಿಸಿಬಿ ಗಮನಕ್ಕೆ ಬಂದಿದೆ. ತಾನು ಸಾಮಾಜಿಕ ಕಾರ್ಯಕರ್ತೆ ಎಂದು ಪೊಲೀಸರ ಬಳಿ ನೇತ್ರಾವತಿ ಹೇಳಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.