ಮಂಡ್ಯ: ಹೆಗಲ ಮೇಲೆ ಕೈ ಹಾಕಲು ಬಂದ ಕಾರ್ಯಕರ್ತನ ತಲೆಗೆ ಪಟಾರ್ ಎಂದು ಹಲವರ ಸಮ್ಮುಖದಲ್ಲೇ ಹೊಡೆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡೆಯನ್ನು ರಾಜ್ಯ ಬಿಜೆಪಿ ತೀವ್ರವಾಗಿ ಖಂಡಿಸಿದೆ.
'ಡಿ.ಕೆ.ಶಿವಕುಮಾರ್ ಅವರಿಗೆ ರೌಡಿ ಕೊತ್ವಾಲನೊಂದಿಗಿದ್ದ ಗತಕಾಲದ ನೆನಪು ಕಾಡಿತೇ? ಒಂದು ರಾಷ್ಟ್ರೀಯ ಪಕ್ಷದ ರಾಜ್ಯ ಅಧ್ಯಕ್ಷನಾಗಿದ್ದುಕೊಂಡು ಸಾರ್ವಜನಿಕವಾಗಿ ಒಬ್ಬ ವ್ಯಕ್ತಿಯ ಮೇಲೆ ಈ ರೀತಿ ಹಲ್ಲೆ ಮಾಡಿರುವುದು ಅಕ್ಷಮ್ಯ' ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಡಿಕೆ ಶಿವಕುಮಾರ್ ತನ್ನ ವರ್ತನೆಯನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು. ನೀವು ಕೊತ್ವಾಲನ ಶಿಷ್ಯ ಆಗಿರಬಹುದು, ಜೈಲಿಗೂ ಹೋಗಿ ಬಂದಿರಬಹುದು. ಆದರೆ ಆ ರಾಕ್ಷಸಿ ಗುಣಗಳನ್ನು ಅಮಾಯಕರ ಮೇಲೆ ತೋರ್ಪಡಿಸಬೇಡಿ. ರಾಜ್ಯಾಧ್ಯಕ್ಷರ ನಡೆ ಇತರರಿಗೆ ಮಾದರಿಯಾಗಿರಲಿ, ಇದು ಬಸವಣ್ಣನ ನಾಡು ಎಂಬುದು ನೆನಪಿರಲಿ ಎಂದು ಬಿಜೆಪಿ ಎಚ್ಚರಿಸಿದೆ.
ಡಿಕೆಶಿ ದರ್ಪದ ವರ್ತನೆ ಹಲವಾರು ಬಾರಿ ಸಾಬೀತುಗೊಂಡಿದೆ. ವ್ಯಕ್ತಿಯೊಬ್ಬರು ಕರೆ ಮಾಡಿ ವಿದ್ಯುತ್ ಸಮಸ್ಯೆ ಹೇಳಿಕೊಂಡಾಗ ಅವರ ಮೇಲೆ ರೇಗಾಡಿ, ಮಧ್ಯ ರಾತ್ರಿಯಲ್ಲಿ ಮನೆಯ ಹೆಂಚು ತೆಗೆದು ಮನೆಯೊಳಗೆ ಇಳಿದು ಬಂಧಿಸುವಷ್ಟರ ಮಟ್ಟಿಗೆ ಅಧಿಕಾರಿಗಳಿಗೆ ಡಿಕೆಶಿ ಒತ್ತಡ ನೀಡಿದ್ದರು. #ರೌಡಿಡಿಕೆಶಿ ಎಂದು ಬಿಜೆಪಿ ಟೀಕಿಸಿದೆ.
'ನಿಮ್ಮ ಸಿಟ್ಟನ್ನು ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ತೀರಿಸಿಕೊಳ್ಳಲು ಆಗೋದಿಲ್ಲ. ಅದಕ್ಕೆ ಕಾರ್ಯಕರ್ತನೊಬ್ಬನ ಮೇಲೆ ಸಿಟ್ಟು ತೀರಿಸಿಕೊಂಡ್ರಾ?'ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.