ಜಿಲ್ಲೆ

ಗುಣಮಟ್ಟದ ಉತ್ಪನ್ನಗಳಿಗೆ ಹೆಸರುವಾಸಿಯಾಗಿರುವ ಸಂಸ್ಥೆ: ಹರ್ಷೇಂದ್ರ ಕುಮಾರ್ ಬಣ್ಣನೆ

Manikya M

ಬೆಳ್ತಂಗಡಿ: ಕನಸಿನ ಮನೆಯ ಕನಸು ನನಸಾಗಿದೆ. ಗುಣಮಟ್ಟದ ಉತ್ಪನ್ನಗಳಿಗೆ ಕನಸಿನ ಮನೆ ಹೆಸರುವಾಸಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ಹೇಳಿದರು.

ಉಜಿರೆಯ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆಯ ನೂತನ ಶಾಖೆಯನ್ನು ವಾಮದಪದವಿನ ಕಲಸಡ್ಕ ಕಾಂಪ್ಲೆಕ್ಸ್‌ನಲ್ಲಿ ಉದ್ಘಾಟಿಸಿ ಮಾತನಾಡಿ, ಈಗಿನ ಕಾಲಘಟ್ಟದಲ್ಲಿ ಉದ್ಯೋಗ ಸಿಗುವುದು ಕಷ್ಟ. ಅದನ್ನು ಸಿಬ್ಬಂದಿ ತಿಳಿದುಕೊಳ್ಳಬೇಕು. ಉದ್ಯೋಗ ಬೇಕು, ಕೆಲಸ ಬೇಡ ಎಂಬ ಮನೋಸ್ಥಿತಿ ಇರಬಾರದು. ಗ್ರಾಹಕರು ಸಂಸ್ಥೆಗೆ ಬರುವಾಗ ಸೇಲ್ಸ್‌ಮನ್‌ಗೆ ಅದರ ಮಾಹಿತಿ ಗೊತ್ತಿರಬೇಕು. ಮಕ್ಕಳು ಕೀರ್ತಿ ತಂದರೆ ಪಾಲಕರು ಸಂತೋಷ ಪಡುತ್ತಾರೆ. ಬದುಕು ಕಟ್ಟೋಣ ಬನ್ನಿ ತಂಡದಿಂದ ಹಲವಾರು ಸಮಾಜಮುಖಿ ಕೆಲಸ ನಡೆಯುತ್ತಿದೆ ಎಂದರು.

ಶಾಸಕ ಹರೀಶ್ ಪೂಂಜ ಮಾತನಾಡಿ, ಕಳೆದ ಹಲವು ದಶಕಗಳಿಂದ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಸಂಸ್ಥೆಯು ಸಮಾಜದಲ್ಲಿ ಬೆಳೆಯುತ್ತಾ ಬಂದಿದ್ದು ನೂರಾರು ಮಂದಿಗೆ ಉದ್ಯೋಗಾವಕಾಶ ಕಲ್ಪಿಸಿ ಎಲ್ಲರ ಮೆಚ್ಚುಗೆ ಗಳಿಸಿದ ಸಂಸ್ಥೆಯಾಗಿ ಬೆಳೆದಿದೆ. ಮೋಹನ್ ಕುಮಾರ್ ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎಂಬ ಧ್ಯೇಯ ಹೊಂದಿರುವ ಉದ್ಯಮಿ ಎಂದರು.

ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ಮಾತನಾಡಿ, ಕನಸಿನ ಮನೆ ಲಕ್ಷ್ಮೀ ಇಂಡಸ್ಟ್ರೀಸ್ ನೆರೆಯ ಬಂಟ್ವಾಳ ತಾಲೂಕಿನ ವಾಮದಪದವಿನಲ್ಲಿ ಶಾಖೆ ತೆರೆದಿದ್ದು ಇಲ್ಲಿನ ಜನರು ಮೋಹನ್ ಕುಮಾರ್ ಅವರಿಗೆ ಆಶೀರ್ವಾದ ಮಾಡಬೇಕು ಎಂದರು.

ಬರೋಡದ ಪ್ರಸಿದ್ಧ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಮಾತನಾಡಿ, ಗ್ರಾಹಕರ ಕನಸಿನ ಮನೆಗೆ ಸೌಂದರ್ಯದ ಸ್ಪರ್ಶ ನೀಡಲು ಮೋಹನ್ ಕುಮಾರ್ ಅವರ ಲಕ್ಷ್ಮೀ ಇಂಡಸ್ಟ್ರೀಸ್ ಸಂಸ್ಥೆ ಸಜ್ಜಾಗಿದೆ ಎಂದರು.

ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಕೆನರಾ ಬ್ಯಾಂಕಿನ ನಿವೃತ್ತ ಅಧಿಕಾರಿ ಜಿ.ಕೆ.ಭಟ್, ಗುತ್ತಿಗೆದಾರ ಅಮ್ಮು ರೈ ಹರ್ಕಾಡಿ ಹಾಗೂ ಚೆನೈತೋಡಿ ಗ್ರಾಪಂ ಅಧ್ಯಕ್ಷೆ ವನಿತಾ ಉಪಸ್ಥಿತರಿದ್ದರು.

ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲೀಕ ಕೆ.ಮೋಹನ್ ಕುಮಾರ್ ಹಾಗೂ ರೇಶ್ಮಾ ಮೋಹನ್ ಕುಮಾರ್, ತಾಯಿ ಲೀಲಾವತಿ ಸ್ವಾಗತಿಸಿದರು.

ನಾನು ಸಮಾಜದಲ್ಲಿ ಬೆಳೆಯಲು ಮೂಲ ಕಾರಣ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವೀ. ಹೆಗ್ಗಡೆ ದಂಪತಿ. ಉದ್ಯಮದಲ್ಲಿ ಅವಕಾಶ ಕಲ್ಪಿಸಿದವರು ಹರ್ಷೇಂದ್ರ ಕುಮಾರ್ ಅವರು. ಇವರ ಸಹಾಯ ಸಹಕಾರ ಉದ್ಯಮದ ಜತೆ ಸಮಾಜ ಸೇವೆಗೂ ನಾಂದಿಯಾಯಿತು. ಕೆ.ಮೋಹನ್ ಕುಮಾರ್, ಮಾಲೀಕ, ಲಕ್ಷ್ಮೀ ಇಂಡಸ್ಟ್ರೀಸ್