ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕರೊನಾ ಸೋಂಕಿನ ನಿಯಂತ್ರಣ ತಪ್ಪಿದೆ. ಜನತಾ ಕರ್ಫ್ಯೂ ಜಾರಿಯಲ್ಲಿದ್ದರೂ ಹಲವರು ನಿರ್ಲಕ್ಷಿಸುತ್ತಿದ್ದಾರೆ. ಹಾಗಾಗಿ ಲಾಕ್ಡೌನ್ ಒಂದೇ ಕೊನೇಯ ಅಸ್ತ್ರ ಎಂದು ತಜ್ಞರಾದಿಯಾಗಿ ಹಲವರು ಅಭಿಪ್ರಾಯಪಟ್ಟಿದ್ದಾರೆ. ಇಂದು ಸಂಜೆ ಈ ಕುರಿತು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಗಾಂಧಿನಗರದ ಅಣ್ಣಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಿಎಂ ಯಡಿಯೂರಪ್ಪ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಮಾತನಾಡಿದ ಸಿಎಂ, ಬೆಳ್ಳಂಬೆಳಗ್ಗೆಯೇ ಅಣ್ಣಮ್ಮ ದೇವಿ ದರ್ಶನ ಪಡೆದೆ. ಕರೊನಾ ದೂರ ಆಗುವ ವಿಶ್ವಾಸ ನನಗೆ ಬಂದಿದೆ. ಕರೊನಾ ಹೋಗಲಿ ಅಂತಲೇ ತಾಯಿಗೆ ಪ್ರಾರ್ಥನೆ ಮಾಡಲು ಬಂದೆ. ಕರೊನಾ ದೂರ ಆಗಬೇಕು ಅಷ್ಟೆ. ಇದಕ್ಕಾಗಿ ಇನ್ನು ಬಿಗಿಕ್ರಮ ಅನಿವಾರ್ಯ. ಜನತಾ ಕರ್ಫ್ಯೂ ಯಾರು ಸರಿಯಾಗಿ ಪಾಲನೆ ಮಾಡ್ತಾ ಇಲ್ಲ. ಲಾಕ್ಡೌನ್ ಅನಿವಾರ್ಯ ಆಗಬಹುದು. ಇಂದಿನ ಸಭೆಯಲ್ಲಿ ಕಠಿಣ ರೂಲ್ಸ್ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು. ಬೆಡ್ ಸಿಗಲ್ಲ ಅಂತ ಸಿಎಂ ಮನೆ ಮತ್ತು ವಿಧಾನಸೌಧ ಬಳಿ ಬರುವುದು ಸರಿಯಲ್ಲ. ಅಧಿಕಾರಿಗಳ ಗಮನಕ್ಕೆ ತನ್ನಿ ಬೆಡ್ ಕೊಡಿಸುವ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಸಂಸದ ತೇಜಸ್ವಿ ಸೂರ್ಯ ಅವರು ಬೆಡ್ ಬ್ಲಾಕಿಂಗ್ ದಂಧೆಯನ್ನ ಹೊರ ತಂದಿದ್ದಾರೆ. ನಾನು ಅವರನ್ನ ಅಭಿನಂದಿಸುವೆ. ಅವರು ರಿಸ್ಕ್ ತಗೊಂಡು ಹಾಸಿಗೆ ಹಂಚಿಕೆ ಅವ್ಯವಹಾರ ಬಹಿರಂಗ ಮಾಡಿದ್ದಾರೆ. ಶಾಸಕ ಜಮೀರ್ ಅಹಮದ್ ಅಂತಹವರು ಹಗುರ ಮಾತು ನಿಲ್ಲಿಸಬೇಕು ಎಂದು ಸಿಎಂ ಹೇಳಿದರು.