ಜಿಲ್ಲೆ

ನಂದಿಬೆಟ್ಟ ಪ್ರವೇಶಕ್ಕೆ ನಾಳೆಯಿಂದಲೇ ಪ್ರವಾಸಿಗರಿಗೆ ಅವಕಾಶ

arunakunigal

ಚಿಕ್ಕಬಳ್ಳಾಪುರ: ಪ್ರಕೃತಿ ಪ್ರಿಯರಿಗೆ ಇಲ್ಲಿದೆ ಗುಡ್​ನ್ಯೂಸ್​. ನಾಳೆಯಿಂದ (ಡಿ.1) ಜಗತ್ಪ್ರಸಿದ್ಧ ನಂದಿಗಿರಿಧಾಮ ಪ್ರವೇಶಕ್ಕೆ ಪ್ರವಾಸಿಗರಿಗೆ ಅವಕಾಶ ಸಿಗಲಿದೆ.

ಕಳೆದ ಆಗಸ್ಟ್ ತಿಂಗಳಲ್ಲಿ ವ್ಯಾಪಕ‌ ಮಳೆಯಿಂದಾಗಿ ನಂದಿಗಿರಿಧಾಮದ ರಸ್ತೆ ಕುಸಿದಿದ್ದರಿಂದ ಸಾರ್ವಜನಿಕರು ಮತ್ತು ವಾಹನಗಳ ಸಂಚಾರಕ್ಕೆ ತೊಂದರೆಯಾಗಿತ್ತು. ರಸ್ತೆ ದುರಸ್ತಿ ಹಿನ್ನೆ ನಂದಿ ಬೆಟ್ಟ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಈಗ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ಡಿ.1ರಿಂದ ಜನರ ಪ್ರವೇಶಕ್ಕೆ ಮುಕ್ತವಾಗಲಿದೆ. ಆದರೆ, ವಾರಾಂತ್ಯದ ಶನಿವಾರ ಮತ್ತು ಭಾನುವಾರ ನಂದಿಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಗಿರಿಧಾಮದ ಹೋಟೆಲ್ ಮತ್ತು ವಸತಿ ಗೃಹಗಳಲ್ಲಿ ಮುಂಗಡವಾಗಿ ಕೊಠಡಿಗಳನ್ನು ಕಾಯ್ದಿರಿಸಿದವರಿಗೆ ಮಾತ್ರ ವಾರಾಂತ್ಯದ ದಿನಗಳಂದು ಪ್ರವೇಶವಿರುತ್ತದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.

ಪ್ರಕೃತಿ ರಮಣೀಯತೆ ಮತ್ತು ಸಸ್ಯಗಳು ಹಾಗೂ ಜೀವವೈವಿಧ್ಯತೆಯ ಕಾರಣದಿಂದ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದು ವಿಶಿಷ್ಠವಾಗಿ ಗುರುತಿಸಿಕೊಂಡಿರುವ ನಂದಿಗಿರಿಧಾಮ ಜಿಲ್ಲೆಯ ಅಮೂಲ್ಯವಾದ ಆಸ್ತಿ ಮತ್ತು ಹೆಮ್ಮೆಯಾಗಿದ್ದು, ಸಾರ್ವಜನಿಕರು ಹಾಗೂ ಪ್ರವಾಸಿಗರು ಸ್ವಚ್ಛತೆ ಕಾಪಾಡುವ ಮೂಲಕ ಗಿರಿಧಾಮದ ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು. ಪ್ಲಾಸ್ಟಿಕ್ ಬಳಸುವಂತಿಲ್ಲ. ಜತೆಗೆ ಕರೊನಾ ಮಾರ್ಗಸೂಚಿಯನ್ನ ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ಮನವಿ ಮಾಡಿದ್ದಾರೆ.