ಜಿಲ್ಲೆ

ಚಂದ್ರಶೇಖರ ಗುರೂಜಿಗೆ ಕಣ್ಣೀರ ವಿದಾಯ

arunakunigal

ಹುಬ್ಬಳ್ಳಿ: ಕುಟುಂಬಸ್ಥರು ಮತ್ತು ಭಕ್ತರ ಆಕ್ರಂದನದ ನಡುವೆಯೇ ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಅವರ ಅಂತ್ಯಕ್ರಿಯೆ ಬುಧವಾರ ಸಂಜೆ ನೆರವೇರಿತು. ಪತ್ನಿ ಅಂಕಿತಾ ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಗುರೂಜಿ ಅವರು ಪ್ರೀತಿಯಿಂದ ಸಾಕಿದ್ದ ಶ್ವಾನ ರೋಧಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಹುಬ್ಬಳ್ಳಿಯ ಸುಳ್ಳ ರಸ್ತೆಯಲ್ಲಿರುವ ಗುರೂಜಿ ಅವರ ಹೊಲದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಕೊಟ್ರಯ್ಯ ಶಾಸ್ತ್ರಿಗಳ ನೇತೃತ್ವದಲ್ಲಿ ಅಂತ್ಯಕ್ರಿಯೆಯ ವಿಧಿವಿಧಾನ ನಡೆಯಿತು.

ಇದಕ್ಕೂ ಮುನ್ನ ಕಿಮ್ಸ್​ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಪಾರ್ಥಿವ ಶರೀರವನ್ನು ಸ್ವಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಕೆಲಕಾಲ ಅಂತಿಮ ದರ್ಶನ ಪಡೆಯಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿತ್ತು. ಕಂಬಿನಿ ಮಿಡಿಯುತ್ತಲೇ ಸಹಸ್ರಾರು ಮಂದಿ ಗುರೂಜಿ ಅವರ ಅಂತಿಮ ದರ್ಶನ ಪಡೆದರು.

ಗೂರೂಜಿ ಅವರು ಸಾಕಿದ್ದ ಪ್ರಿತೀಯ ನಾಯಿಯನ್ನೂ ಸ್ಥಳಕ್ಕೆ ಸಿಬ್ಬಂದಿ ಕರೆತಂದಿದ್ದರು. ಪಾರ್ಥಿವ ಶರೀರದ ಬಳಿ ಗುರೂಜಿಗಾಗಿ ಶ್ವಾನ ರೋಧಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಗುರೂಜಿ ಅವರ ಪುತ್ರಿ ಸ್ವಾತಿ, ಅಣ್ಣನ ಮಗ ಸಂಜಯ ಅಂಗಡಿ ಅವರು ಅಂತಿಮ ವಿಧಿವಿಧಾನ ನೆರವೇರಿಸಿದರು.

ಶಾಸಕ ಶಂಕರಪಾಟೀಲ ಮುನೇನಕೊಪ್ಪ, ಸಿದ್ದ ಸಂಸ್ಥಾನ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ, ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್​ ಸೇರಿದಂತೆ ಸಾವಿರಾರು ಮಂದಿ ಚಂದ್ರಶೇಖರ ಗುರೂಜಿ ಅವರ ಅಂತಿಮ ದರ್ಶನ ಪಡೆದರು.