

ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಹಂತಕರ ಬಂಧನ ವಿಚಾರದಲ್ಲಿ ಹುಬ್ಬಳ್ಳಿ ಪೊಲೀಸರು ಸುಖಾ ಸುಮ್ಮನೆ ಕ್ರೆಡಿಟ್ ತಗೊಂಡ್ರಾ? ಎಂಬ ಚರ್ಚೆ ಶುರುವಾಗಿದೆ. ಗುರೂಜಿ ಕೊಲೆಯಾದ ನಾಲ್ಕು ಗಂಟೆಯಲ್ಲೇ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಬೆಳಗಾವಿಯತ್ತ ಕಾರಿನಲ್ಲಿ ಹೊರಟಿದ್ದ ಆರೋಪಿಗಳಿಬ್ಬರನ್ನೂ ರಾಮದುರ್ಗದಲ್ಲಿ ಬಂಧಿಸಿ ಕರೆತಂದಿದ್ದಾರೆ.
ಆದರೆ, ಪೊಲೀಸರು ಬಂಧಿಸಿ ಕರೆದೊಯ್ಯುವ ವೇಳೆ ಸ್ಥಳೀಯರಿಗೆ ಆರೋಪಿಗಳು, 'ಹೋಗ್ರೀ.. ಪೊಲೀಸರನ್ನ ನಾವೇ ಬರೋಕೆ ಹೇಳಿದ್ದು' ಎಂದಿದ್ದಾರೆ. ಈ ಮಾತು ಅನುಮಾನಕ್ಕೀಡು ಮಾಡಿದೆ.
ಕಲಘಟಗಿ ತಾಲೂಕಿನ ಧುಮ್ಮವಾಡದ ಮಹಾಂತೇಶ ಶಿರೂರ ಮತ್ತು ಮಂಜುನಾಥ ಮರೇವಾಡ ಬಂಧಿತರು. ಇವರಿಬ್ಬರೂ ವಾಸ್ತು ಸಂಸ್ಥೆಯ ಮಾಜಿ ಉದ್ಯೋಗಿಗಳು. ಮಹಾಂತೇಶ ಶಿರೂರನ ಪತ್ನಿ ವನಜಾಕ್ಷಿಯೂ ಇದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಳು. ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ಹುಬ್ಬಳ್ಳಿಯ ಪ್ರೆಸಿಡೆಂಟ್ ಹೋಟೆಲ್ನ ರಿಸೆಪ್ಶನ್ನಲ್ಲಿ ಚಂದ್ರಶೇಖರ ಗುರೂಜಿ ಅವರನ್ನ 60ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಚುಚ್ಚಿ ಕೊಂದು ಪರಾರಿಯಾಗಿದ್ದರು.
ಹಂತಕರ ಬಂಧನಕ್ಕೆ ಹುಬ್ಬಳ್ಳಿ ಪೊಲೀಸರು 5 ತಂಡ ರಚಿಸಿಕೊಂಡು ಮಿಂಚಿನ ಕಾರ್ಯಾಚರಣೆ ನಡೆಸಿದ್ದರು. ಆರೋಪಿಗಳನ್ನ ಬಂಧಿಸಿದ್ದಾರೆ. ಗೌಪ್ಯ ಸ್ಥಳದಲ್ಲಿ ಇಟ್ಟು ವಿಚಾರಣೆ ಮುಂದುವರಿಸಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ 'ಆರೋಪಿಗಳೇ ವಿದ್ಯಾನಗರ ಪೊಲೀಸ್ ಠಾಣೆಗೆ ಕರೆ ಮಾಡಿ ತಾವಿದ್ದ ಸ್ಥಳದ ವಿವರ ನೀಡಿ, ಶರಣಾಗೋದಾಗಿ ಹೇಳಿದ್ದರು. ತಕ್ಷಣ ಅಲರ್ಟ್ ಆದ ಹುಬ್ಬಳ್ಳಿಯ ಖಾಕಿ ಪಡೆ, ಡಿವೈಎಸ್ಪಿ ರಾಮನಗೌಡ ಹಟ್ಟಿ ಅವರಿಗೆ ಮಾಹಿತಿ ರವಾನಿಸಿದೆ. ಹುಬ್ಬಳ್ಳಿ-ಬೆಳಗಾವಿ ಮಧ್ಯದ ರಾಮದುರ್ಗದಲ್ಲಿ ಆರೋಪಿಗಳನ್ನ ಬಂಧಿಸಿದ್ದಾರೆ. ಆರೋಪಿಗಳೇ ಸರೆಂಡರ್ ಆದರೂ ವಿಚಾರ ಮುಚ್ವಿಟ್ಟು, ತಾವೇ ಬಂಧಿಸಿದ್ದಾಗಿ ಹೇಳುತ್ತಿದ್ದಾರೆ' ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಆಗುತ್ತಿದೆ.