ಜಿಲ್ಲೆ

ಹುಣಸೂರಲ್ಲಿ ಕಾರು-ಬೈಕ್​ಗಳ ನಡುವೆ ಭೀಕರ ಅಪಘಾತ: ಅಣ್ಣನ ಸಾವಿನ ಸುದ್ದಿ ಕೇಳಿ ಪ್ರಾಣಬಿಟ್ಟ ತಂಗಿ

ಹುಣಸೂರು: ಸೋಮನಹಳ್ಳಿ ಬಳಿ ಎರಡು ಬೈಕ್​ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಅಣ್ಣ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಮನೆಯಲ್ಲಿದ್ದ ತಂಗಿಯ ಪ್ರಾಣಪಕ್ಷಿ ಹಾರಿ ಹೋಗಿದೆ. ಅಣ್ಣ-ತಂಗಿಯ ಸಾವಿಂದ ಕುಟುಂಬಸ್ಥರು ಕಂಗಾಲಾಗಿದ್ದು, ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.

ಬನ್ನಿಕುಪ್ಪೆ ಗ್ರಾಮದ 'ವಿಜಯವಾಣಿ' ಪತ್ರಿಕೆ ಪ್ರತಿನಿಧಿ ಚಲುವರಾಜು ಅವರ ಪುತ್ರ ಕೀರ್ತಿರಾಜ್​(39) ಮತ್ತು ಚಲುವರಾಜು ಅವರ ತಮ್ಮನ ಮಗಳು ರಶ್ಮಿ(21) ಸಾವಲ್ಲೂ ಒಂದಾದ ಅಣ್ಣ-ತಂಗಿ. ಸೋಮವಾರ ರಾತ್ರಿ ಕೀರ್ತಿರಾಜ್​ ಮೈಸೂರಿನತ್ತ ಪ್ರಯಾಣಿಸುತ್ತಿದ್ದರು. ಮಾರ್ಗಮಧ್ಯೆ ಹುಣಸೂರು ತಾಲೂಕಿನ ಸೋಮನಹಳ್ಳಿ ಬಳಿ ನಿಯಂತ್ರತಪ್ಪಿದ ಕಾರು ಎರಡು ಬೈಕ್​ಗಳಿಗೆ ಡಿಕ್ಕಿ ಹೊಡೆದು ರಸ್ತೆಬದಿಯ ಮರಕ್ಕೆ ಅಪ್ಪಳಿಸಿತ್ತು. ಪರಿಣಾಮ ಕೀರ್ತಿರಾಜ್​ ಸ್ಥಳದಲ್ಲೇ ಮೃತಪಟ್ಟರು.

ಅಪಘಾತದಲ್ಲಿ ಗಾಯಗೊಂಡಿದ್ದ ಮೈಸೂರು ನಗರದ ನಿವಾಸಿ ರವಿಕುಮಾರ್​ (37) ಮಂಗಳವಾರ ಮೃತಟ್ಟಿದ್ದು, ಮೈಸೂರಿನ ಉದಯಗಿರಿಯ ನಿವಾಸಿ ಇರ್ಫಾನ್​ ಖಾನ್​ ಮತ್ತು ಬನ್ನಿಕುಪ್ಪೆ ಗ್ರಾಮದ ನಾಗೇಂದ್ರ ತೀವ್ರವಾಗಿ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅತ್ತ ಅಣ್ಣ ಕೀತಿರಾಜ್​​ ಕಾರು ಅಪಘಾತದಲ್ಲಿ ಮೃತಪಟ್ಟ ವಿಷಯ ತಿಳಿದ ಸಹೋದರಿ ರಶ್ಮಿ(21) ತೀವ್ರ ಹೃದಯಾಘಾತದಿಂದ ಮೃತಪಟ್ಟರು. ಅಣ್ಣ ತಂಗಿಯರು ಒಂದಾಗಿ ಹೋಗಿದ್ದು, ಕುಟುಂಬಸ್ಥರು ಮತ್ತು ಗ್ರಾಮಸ್ಥರಿಗೆ ಆಘಾತ ಉಂಟು ಮಾಡಿದೆ. ಇವರಿಬ್ಬರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ಮಂಗಳವಾರ ಸಂಜೆ ನೆರವೇರಿತು.