ವಿಜಯವಾಣಿ ಸುದ್ದಿಜಾಲ ಮಂಗಳೂರು/ ಉಡುಪಿ
ಕರಾವಳಿಯಲ್ಲಿ ಭಾನುವಾರ ಆರೆಂಜ್ ಅಲರ್ಟ್ ಇದ್ದರೂ ನಿರೀಕ್ಷಿತ ಭಾರಿ ಮಳೆಯಾಗಿಲ್ಲ. ಮಧ್ಯಾಹ್ನವರೆಗೆ ಮೋಡ ಕವಿದ ವಾತಾವರಣವಿದ್ದು, ದಿನವಿಡೀ ಆಗಾಗ ಅಲ್ಪ ಪ್ರಮಾಣದಲ್ಲಿ ವರ್ಷಧಾರೆ ಕಂಡುಬಂತು. ಹವಾಮಾನ ಇಲಾಖೆ ಜುಲೈ 22ರಂದು ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ.
ದ.ಕ. ಜಿಲ್ಲೆಯಲ್ಲಿ ಭಾನುವಾರ ನಸುಕಿನ ಜಾವ ಹಾಗೂ ಸಂಜೆ ಮಳೆ ಸುರಿದಿದೆ. ಬಳಿಕ ಮೋಡದ ವಾತಾವರಣ ಇದ್ದು, ಆಗಾಗ ತುಂತುರು ಮಳೆಯಾಗಿದೆ. ಮಧ್ಯಾಹ್ನ ನಂತರ ಜಿಲ್ಲಾದ್ಯಂತ ಹಗುರ ಮಳೆಯಾಗಿದೆ. ಜಡಿ ಮಳೆಗೆ ಸದ್ಯಕ್ಕೆ ಬ್ರೇಕ್ ಬಿದ್ದಿದ್ದು, ದಿನಪೂರ್ತಿ ಮೋಡ ಕವಿದ ವಾತಾವರಣ ಕಂಡುಬಂದಿದೆ.
ಉಡುಪಿ ಜಿಲ್ಲೆಯಲ್ಲಿ ಮಳೆ ಆರ್ಭಟ ಕಡಿಮೆಯಾಗಿದ್ದರೂ ಜಿಲ್ಲೆಯಲ್ಲಿ ನೆರೆ ಇಳಿದಿಲ್ಲ. ನದಿಗಳೆಲ್ಲವೂ ಮೈದುಂಬಿ ಹರಿದು, ಕೃಷಿ ತೋಟ ಹಾಗೂ ಗದ್ದೆಗಳೆಲ್ಲ ಜಲಾವೃತ ಸ್ಥಿತಿಯಲ್ಲಿಯೇ ಇವೆ. ಕುಂದಾಪುರ ತಾಲೂಕಿನ 21 ಕುಟುಂಬಗಳ ತೋಟಗಾರಿಕಾ ಬೆಳೆಗಳು ಹಾನಿಯಾಗಿವೆ. ಕಾರ್ಕಳ ತಾಲೂಕಿನಲ್ಲಿ ಎರಡು ಕುಟುಂಬಗಳ ಮನೆ, ಕೊಟ್ಟಿಗೆ ಹಾಗೂ ಕುಂದಾಪುರ, ಕಾಪು ತಾಲೂಕಿನ ಮೂರು ಕುಟುಂಬಗಳ ಮನೆಯ ಮೇಲೆ ಮರ ಉರುಳಿ ಭಾಗಶಃ ಹಾನಿಯಾಗಿದೆ.
ರಾಜ್ಯದ ಕರಾವಳಿಯಲ್ಲಿ ಜುಲೈ 22ರಿಂದ 25ರವರೆಗೆ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ದಿನಗಳಲ್ಲಿ 64.05 ಮಿ.ಮೀನಿಂದ 115.05 ಮಿ.ಮೀ. ಮಳೆಯಾಗಲಿದೆ. ಅಲ್ಲದೆ, ಗಂಟೆಗೆ 30-40 ಕಿ.ಮೀ ವೇಗದಲ್ಲಿ ಭಾರಿ ಬಿರುಗಾಳಿಯೂ ಬೀಸಲಿದ್ದು, ಮೀನುಗಾರರು ಸಮುದ್ರಕ್ಕೆ ಹೋಗದಂತೆ ಎಚ್ಚರಿಕೆ ನೀಡಲಾಗಿದೆ.
ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ 36.04 ಮಿ.ಮೀ. ಸರಾಸರಿ ಮಳೆಯಾಗಿದೆ. ಬೆಳ್ತಂಗಡಿಯಲ್ಲಿ ಗರಿಷ್ಠ 49.4 ಮಿ.ಮೀ, ಬಂಟ್ವಾಳ 39.7, ಮಂಗಳೂರು 36.8, ಪುತ್ತೂರು 27.9, ಸುಳ್ಯ 11.7, ಮೂಡುಬಿದಿರೆ 36.9, ಕಡಬ 41.4, ಮೂಲ್ಕಿ 33.9, ಉಳ್ಳಾಲದಲ್ಲಿ 29.2 ಮಿ.ಮೀ ಮಳೆಯಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳ 40.06 ಮಿ.ಮೀ., ಕುಂದಾಪುರ- 34.04, ಉಡುಪಿ- 29.00, ಬೈಂದೂರು- 52.07, ಬ್ರಹ್ಮಾವರ- 24.09, ಕಾಪು- 32.05 ಹಾಗೂ ಹೆಬ್ರಿ ತಾಲೂಕಿನಲ್ಲಿ 29.03 ಮಿ.ಮೀ. ಮಳೆಯಾಗಿದೆ.