ಜಿಲ್ಲೆ

ಮೈಸೂರಲ್ಲಿ ಬ್ಲ್ಯಾಕ್ ಫಂಗಸ್​ಗೆ ಕರೊನಾ ವಾರಿಯರ್​ ಬಲಿ!

arunakunigal

ಮೈಸೂರು: ಕರೊನಾ ಸೋಂಕಿನಿಂದ ಮೃತಪಟ್ಟವರ ಶವಗಳನ್ನು ಅಂತ್ಯಸಂಸ್ಕಾರಕ್ಕೆ ಸಾಗಿಸುತ್ತಿದ್ದವ ಮತ್ತು ಫಾಗಿಂಗ್ ವಾಹನದಲ್ಲಿ ಕೆಲಸ ಮಾಡುತ್ತಿದ್ದವ ಸೇರಿ ಇಬ್ಬರು ಕರೊನಾಗೆ ಬಲಿಯಾಗಿದ್ದಾರೆ. ಈ ಪೈಕಿ ಬ್ಲ್ಯಾಕ್ ಫಂಗಸ್ ಆಗಿ ಜಿಲ್ಲೆಯಲ್ಲಿ ಮೊದಲ ಬಲಿ ಆಗಿದೆ ಎಂಬ ಆತಂಕಕಾರಿ ಅಂಶ ಬಯಲಾಗಿದೆ.

ಮೈಸೂರು ಮಹಾನಗರ ಪಾಲಿಕೆ ಗುತ್ತಿಗೆ ನೌಕರಾಗಿದ್ದ ವಿನೋದ್ (28) ಮತ್ತು ರವಿ (38) ಮೃತರು. ರವಿ ಕೋವಿಡ್​ಗೆ ಬಲಿಯಾದವರ ಮೃತದೇಹ ಸಾಗಿಸುವ ವಾಹನದ ಚಾಲಕರಾಗಿದ್ದರು. ವಿನೋದ್ ಫಾಗಿಂಗ್ ವಾಹನದಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

16 ದಿನದ ಹಿಂದೆ ರವಿಗೆ ಕರೊನಾ ಸೋಂಕು ಕಾಣಿಸಿಕೊಂಡಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೋವಿಡ್ ನಂತರ ರವಿಗೆ ಬ್ಲ್ಯಾಕ್ ಫಂಗಸ್ ಆಗಿದ್ದು, ಶಸ್ತ್ರಚಿಕಿತ್ಸೆಯನ್ನೂ ಮಾಡಲಾಗಿತ್ತು. ಆದರೆ ಇಂದು ಕೊನೆಯುಸಿರೆಳೆದಿದ್ದಾರೆ. ಬ್ಲ್ಯಾಕ್​ ಫಂಗಸ್​ಗೆ ಮೈಸೂರಿನಲ್ಲಿ ಇದು ಮೊದಲ ಬಲಿ ಎನ್ನಲಾಗಿದೆ.

ವಿನೋದ್​ಗೆ ಮೂರು ದಿನದ ಹಿಂದೆ ಕರೊನಾ ಸೋಂಕು ತಗುಲಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಅವರೂ ಮೃತಪಟ್ಟಿದ್ದಾರೆ.