ಜಿಲ್ಲೆ

ಎಂಇಎಸ್ ಬದಲು ಬಿಜೆಪಿಗೆ ಜೈ ಎಂದ ಮರಾಠಿ ಭಾಷಿಕರು! ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ 50 ವರ್ಷದ ಇತಿಹಾಸದಲ್ಲಿ ಬಿಜೆಪಿ ಪಾಲಿಗೆ ಇಂದು ಅವಿಸ್ಮರಣೀಯ ದಿನ. ಈ ಬಾರಿ ಪಾಲಿಕೆ ಚುನಾವಣೆಯಲ್ಲಿ ಮರಾಠಿ ಭಾಷಿಕರು ಎಂಇಎಸ್ ಬದಲು ಬಿಜೆಪಿಗೆ ಜೈ ಎಂದಿದ್ದು, ಪಾಲಿಕೆ ಗಾದಿಯಲ್ಲಿ ಬಿಜೆಪಿಯನ್ನ ಕೂರಿಸಿದ್ದಾರೆ.

ಮರಾಠಿ ಭಾಷಿಕರನ್ನ ದಾಳವಾಗಿಸಿಕೊಂಡು ದಶಕಗಳಿಂದ ಬೆಳಗಾವಿಯಲ್ಲಿ ಎಂಇಎಸ್ ರಾಜಕೀಯ ಮಾಡುತ್ತಿತ್ತು. ಈ ಮೊದಲು ಬೆಳಗಾವಿ ಜಿಲ್ಲೆಯಲ್ಲಿ 5 ಮಂದಿ ಎಂಇಎಸ್ ಶಾಸಕರು ಆಯ್ಕೆಯಾಗುತ್ತಿದ್ದರು. ಕಳೆದ ಚುನಾವಣೆಯಲ್ಲಿ ಒಬ್ಬ ಎಂಇಎಸ್​ ಶಾಸಕನೂ ಆಯ್ಕೆಯಾಗಿಲ್ಲ. ಇನ್ನು ಕಳೆದ ಬಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಂಇಎಸ್​ 30 ಸ್ಥಾನ ಗೆದ್ದಿತ್ತು. ಈ ಬಾರಿ 58 ವಾಡ್೯ಗಳ ಪೈಕಿ ಕೇವಲ 2 ಮಾತ್ರವೇ ಎಂಇಎಸ್​ ಪಾಲಾಗಿದೆ.

ಗಡಿ, ಭಾಷೆ ವಿಚಾರ ಮುಂದಿಟ್ಟುಕೊಂಡು ಬೆಳಗಾವಿಯಲ್ಲಿ ರಾಜಕೀಯ ಮಾಡುತ್ತಿದ್ದ ಎಂಇಎಸ್​ಗೆ ಈ ಸಲದ ಚುನಾವಣೆ ಭಾರೀ ಮುಖಭಂಗ ತರಿಸಿದೆ. ಇದೇ ಮೊದಲ ಬಾರಿಗೆ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಕ್ಕಿದೆ.

ಮರಾಠಿ ಮತದಾರರು ಎಂಇಎಸ್​ನಿಂದ ದೂರ ಸರಿದಿದ್ದಾರೆ ಎಂಬುದಕ್ಕೆ ಈ ಚುನಾವಣೆಯ ಫಲಿತಾಂಶವೇ ಸಾಕ್ಷಿ. ಮರಾಠಿ ಭಾಷಿಕ ಮತದಾರರನ್ನ ಸೆಳೆಯುವಲ್ಲಿ ಯಶಸ್ವಿಯಾದ ಬಿಜೆಪಿ, ಆ ಪ್ರದೇಶದಲ್ಲಿ ಜಯದ ಕೇಕೆ ಹಾಕಿದೆ.

ಪಾಲಿಕೆಯ 58 ವಾಡ್೯ಗಳಲ್ಲಿ 54 ಸ್ಥಾನಕ್ಕೆ ಬಿಜೆಪಿ ಸ್ಪರ್ಧಿಸಿತ್ತು. ಈ ಪೈಕಿ ಒಟ್ಟು 36 ವಾರ್ಡ್​ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಪಾಲಿಕೆಯಲ್ಲಿ ಅಧಿಕಾರಕ್ಕೇರಲು ಒಟ್ಟು 31 ಸ್ಥಾನ ಗೆಲಲ್ಲಬೇಕಿದೆ. ಆದರೆ, ಬಿಜೆಪಿ ಇನ್ನೂ 5 ಸ್ಥಾನವನ್ನ ಹೆಚ್ಚು ಗೆದ್ದು ಇತಿಹಾಸ ನಿರ್ಮಿಸಿದೆ.