ಧಾರವಾಡ: ಬಿಜೆಪಿ ಹಿರಿಯ ಕಾರ್ಯಕರ್ತ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲುವಾಸ ಅನುಭವಿಸಿದ್ದ, ವಿದ್ಯಾರ್ಥಿ ದೆಸೆಯಲ್ಲೇ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ರಾಜೇಂದ್ರ ಗೋಖಲೆ ಅವರು ಭಾನುವಾರ ಬೆಳಗ್ಗೆ ನಿಧನರಾದರು. ಇವರಿಗೆ 61 ವರ್ಷ ವಯಸ್ಸಾಗಿತ್ತು.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಧಾರವಾಡದ ರಾಮನಗರ ನಿವಾಸಿ ರಾಜೇಂದ್ರ ಕಿಶನ್ರಾವ್ ಗೋಖಲೆ ಅವರನ್ನು ಪುಣೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಪುಣೆಯಲ್ಲೇ ಕೊನೆಯುಸಿರೆಳೆದರು. ಮೃತರಿಗೆ ಪತ್ನಿ ಮತ್ತು ಪುತ್ರ ಇದ್ದಾರೆ.
ರಾಜೇಂದ್ರ ಗೋಖಲೆ ಅವರು ವಿದ್ಯಾರ್ಥಿ ದೆಸೆಯಲ್ಲೇ ಹೋರಾಟದ ಮನೋಭಾವ ಬೆಳೆಸಿಕೊಂಡಿದ್ದರು. ಎಬಿವಿಪಿ (ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್)ನ ಕಾರ್ಯಕರ್ತರಾಗಿದ್ದರು. ಅನೇಕ ಹೋರಾಟಗಳನ್ನು ಸಂಘಟಿಸಿ ಮುಂದಾಳತ್ವ ವಹಿಸುತ್ತಿದ್ದರು. ವಿದ್ಯಾರ್ಥಿ ಜೀವನದ ನಂತರ ಸಂಘಟನೆಯಲ್ಲೇ ಸಂಪೂರ್ಣ ತೊಡಗಿದ್ದರು.
ಧಾರವಾಡ ನಗರದ ಕೆ.ಎಚ್. ಕಬ್ಬೂರ ಡಿಪ್ಲೊಮಾ ಕಾಲೇಜಿನಲ್ಲಿ ಫ್ಯಾಕಲ್ಟಿಯಾಗಿ ಹಲವು ವರ್ಷ ಕಾರ್ಯನಿರ್ವಹಿಸಿದ್ದರು. ಆರ್ಎಸ್ಎಸ್ ಒಡನಾಟದೊಂದಿಗೆ ಅನೇಕರಿಗೆ ನಾಯಕತ್ವ ಗುಣ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಿಜೆಪಿ ಸಕ್ರಿಯ ಕಾರ್ಯಕರ್ತರಾಗಿ ದುಡಿದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲುವಾಸ ಅನುಭವಿಸಿದ್ದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಅವರೊಂದಿಗೆ ರಾಜೇಂದ್ರ ಗೋಖಲೆ ಆತ್ಮೀಯ ಒಡನಾಟ ಹೊಂದಿದ್ದರು. ಆದರೆ, ಇವರಿಗೆ ರಾಜಕೀಯಲ್ಲಿ ಯಾವುದೇ ಸ್ಥಾನಮಾನ ದೊರೆಯಲೇ ಇಲ್ಲ.