ಜಿಲ್ಲೆ

ಬೈಕ್ ರೈಡ್​ ಫಾರ್​ ಅಪ್ಪು- ಯುವರತ್ನನಿಗೆ ಅರ್ಪಣೆ: ಪುನೀತ್​ ಸ್ಮರಣಾರ್ಥ ಸಚಿವರಿಂದ ಚಾಲನೆ

arunakunigal

ಬೆಂಗಳೂರು: ನಟ ಪುನೀತ್​ ರಾಜ್​ಕುಮಾರ್​ ಅವರು ನಮ್ಮನ್ನು ಅಗಲಿ ಒಂದು ತಿಂಗಳಾಗಿದೆ. ಅವರ ನೆನಪಿನಲ್ಲಿ ಇಂದು(ಭಾನುವಾರ) ಫ್ರೀಡಂ ಪಾರ್ಕ್​ನಿಂದ ಅಪ್ಪು ಸಮಾಧಿವರೆಗೂ ಬೈಕ್ ರೈಡ್ ನಡೆಸಲಾಯಿತು.

''ರೈಡ್​ ಫಾರ್​ ಅಪ್ಪು- ಯುವರತ್ನನಿಗೆ ಅರ್ಪಣೆ” ನಾಮಾಂಕಿತದಲ್ಲಿ ದ್ವಿಚಕ್ರ ಸಂಸ್ಥೆ ಮತ್ತು ಇಂಚರ ಸ್ಟುಡಿಯೋ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಸಚಿವ ಡಾ.ಸಿ.ಎನ್​.ಅಶ್ವತ್ಥ ನಾರಾಯಣ ಚಾಲನೆ ನೀಡಿದರು. ಪುನೀತ್​ ರಾಜ್​ಕುಮಾರ್​ ಅವರು ಅಭಿನಯದ ಜತೆಗೆ ಸಮಾಜಮುಖಿ ಕಾರ್ಯಕ್ರಮ ಮೂಲಕವೂ ಕೋಟ್ಯಂತರ ಜನರ ಮನಸ್ಸಲ್ಲಿ ಚಿರಾಯುವಾಗಿ ಉಳಿದಿದ್ದಾರೆ. ಪುನೀತ್​ರ ಸಾಧನೆ ವಿದ್ಯಾರ್ಥಿ ಸಮುದಾಯ ಸೇರಿದಂತೆ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ. ಎಲ್ಲರಲ್ಲೂ ಸಮಾಜಪರ ಮನೋಭಾವ ಬೆಳೆಯಬೇಕು ಎಂದರು.

ರಸ್ತೆ ಸುರಕ್ಷತೆಯ ಜಾಹೀರಾತುವೊಂದರಲ್ಲಿ ಹೆಲ್ಮೆಟ್​ ಧರಿಸುವಿಕೆಯ ಮಹತ್ವ ಕುರಿತು ಬೈಕ್​ ಸವಾರರಿಗೆ ಪುನೀತ್​ ರಾಜ್​ಕುಮಾರ್​ ನೀಡಿದ್ದ ಸಂದೇಶದ ಬಗ್ಗೆ ಇದೇ ವೇಳೆ ಸ್ಮರಿಸಲಾಯಿತು. ಸಚಿವ ಅಶ್ವತ್ಥ ನಾರಾಯಣ ಕೂಡ ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸುವ ಮೂಲಕವೇ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 200ಕ್ಕೂ ಹೆಚ್ಚು ಜನರು ಬೈಕ್ ರೈಡ್​ನಲ್ಲಿ ಪಾಲ್ಗೊಂಡಿದ್ದರು. ಪ್ರತಿಯೊಬ್ಬರೂ ಹೆಲ್ಮೆಟ್​ ಧರಿಸಿದ್ದರು. ಎಲ್ಲರಿಗೂ ಟೀ-ಶರ್ಟ್​, ಬ್ಯಾಡ್ಜ್​, ಸರ್ಟಿಫಿಕೇಟ್​, ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಫ್ರೀಡಂ ಪಾರ್ಕ್​ನಿಂದ ಹೊರಟ ಬೈಕ್​ ರ್ಯಾಲಿ ಅಪ್ಪು ಸಮಾಧಿವರೆಗೆ ತಲುಪಿತು. ಬಳಿಕ ಅಪ್ಪು ಸಮಾಧಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.