ಜಿಲ್ಲೆ

ನನ್ನ ತಾಯಾಣೆ.. ಅಷ್ಟೊಂದು ಹಣವನ್ನು ಜೀವನದಲ್ಲಿ ನೋಡಿಯೇ ಇರಲಿಲ್ಲ: ಮಂಜು ಪಾವಗಡ

arunakunigal

ಬೆಂಗಳೂರು: ಬಿಗ್​ಬಾಸ್​ ಸೀಸನ್​- 8ಕ್ಕೆ ವರ್ಣರಂಜಿತ ತೆರೆಬಿದ್ದಿದ್ದು, ಮಜಾಭಾರತದ ಲ್ಯಾಗ್​ ಮಂಜು ಖ್ಯಾತಿಯ ಮಂಜು ಪಾವಗಡ ವಿನ್ನರ್​ ಆಗಿ ಹೊರಹೊಮ್ಮಿದ್ದಾರೆ. ಅರವಿಂದ್​ ಕೆಪಿ ರನ್ನರ್​ ಅಪ್​ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಬಿಗ್​ಬಾಸ್​ನ ವಿನ್ನರ್​ ಪಟ್ಟದ ಜತೆಗೆ 53 ಲಕ್ಷ ರೂಪಾಯಿ ಮಂಜು ಅವರಿಗೆ ಸಿಕ್ಕಿದೆ. ಬಡತನದಲ್ಲೇ ಹುಟ್ಟಿ, ಬಡತನದಲ್ಲೇ ಬೆಳೆದ ಮಂಜು ಅವರು ಜೀವನದಲ್ಲಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಎಲ್ಲರನ್ನೂ ನಗಿಸುತ್ತಲೇ ರಾಜ್ಯಾದ್ಯಂತ ಮನೆ ಮಾತಾದ ಮಂಜು ಅವರು ಕನ್ನಡದ ಅತ್ಯಂತ ದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ನಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ.

ಇದೇ ವೇಳೆ ಮಾಧ್ಯಗಳಿಗೆ ಪ್ರತಿಕ್ರಿಯಿಸಿದ ವಿನ್ನರ್​ ಮಂಜು, 'ನನ್ನ ತಾಯಾಣೆ ನಾನು ಅಷ್ಟೊಂದು ಹಣವನ್ನು ಎಂದಿಗೂ ನೋಡೇ ಇಲ್ಲ, ಕೇಳಿರೋದಷ್ಟೆ. ಏನು ಮಾಡಬೇಕು ಅಂತ ನನಗೆ ಗೊತ್ತಿಲ್ಲ. ಅಪ್ಪ-ಅಮ್ಮ ಅವರನ್ನು ನಾನು ಚೆನ್ನಾಗಿ ನೋಡಿಕೊಳ್ಳಬೇಕು. ಇದೇ ನನ್ನ ದೊಡ್ಡ ಆಸೆ' ಎಂದು ಹೇಳಿದರು. 'ದಿವ್ಯಾ ಸುರೇಶ್​ ನನ್ನ ಬೆಸ್ಟ್​ ಫ್ರೆಂಡ್​. ಒಳ್ಳೆಯ ಸ್ಪರ್ಧಿ ಕೂಡ' ಎಂದು ಮಂಜು ಹೇಳಿದರು.

ಮಹಾಮಾರಿ ಕರೊನಾ ಲಾಕ್​ಡೌನ್​ನಿಂದ 75 ದಿನಗಳಿಗೆ ಮೊಟಕುಗೊಂಡು ಮತ್ತೆ ಎರಡನೇ ಇನ್ನಿಂಗ್ಸ್​ ಆರಂಭಿಸುವ ಮೂಲಕ ರಿಯಾಲಿಟಿ ಶೋ ಇತಿಹಾಸದಲ್ಲೇ ದಾಖಲೆ ಬರೆದ ಬಿಗ್​ಬಾಸ್​ 8ನೇ ಆವೃತ್ತಿಗೆ ಭಾನುವಾರ(ಆ.8) ವರ್ಣರಂಜಿತ ತೆರೆಬಿದ್ದಿದೆ.