ಜಿಲ್ಲೆ

ಸೆ.25ರಿಂದ ಬಿಗ್ ಬಾಸ್ 9ನೇ ಸೀಸನ್ ಪ್ರಸಾರ: ಹಳಬರು-ಹೊಸಬರ ಸಮ್ಮಿಲನ

arunakunigal

ಬೆಂಗಳೂರು: ಕಳೆದ ತಿಂಗಳಷ್ಟೇ ಪ್ರಾರಂಭವಾಗಿದ್ದ ‘ಬಿಗ್ ಬಾಸ್ ಓಟಿಟಿ ಕನ್ನಡ’ದ ಮೊದಲ ಸೀಸನ್ ಈಗ ಮುಕ್ತಾಯದ ಹಂತಕ್ಕೆ ಬಂದಿದೆ. ಈ ವಾರಾಂತ್ಯ ಕಾರ್ಯಕ್ರಮ ಮುಕ್ತಾಯವಾಗಲಿದ್ದು, ಒಂದು ವಾರದ ಗ್ಯಾಪ್​ನ ನಂತರ, ಅಂದರೆ ಸೆ. 25ರಿಂದ ‘ಬಿಗ್ ಬಾಸ್’ನ ಒಂಬತ್ತನೇ ಸೀಸನ್ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.

ಸದ್ಯ ಪ್ರಸಾರವಾಗುತ್ತಿರುವ ‘ಬಿಗ್ ಬಾಸ್ ಓಟಿಟಿ ಕನ್ನಡ’ದ ಮೊದಲ ಸೀಸನ್ ವೂಟ್ ಸೆಲೆಕ್ಟ್​ನಲ್ಲಿ 24 ತಾಸುಗಳ ಕಾಲ ಪ್ರಸಾರವಾಗುತ್ತಿದೆ. ಇನ್ನು, ವಾರಾಂತ್ಯದ ಕಾರ್ಯಕ್ರಮವನ್ನು ಸುದೀಪ್ ನಡೆಸಿಕೊಡುತ್ತಿದ್ದಾರೆ. ಈ ಬಾರಿ ಬೇರೆಬೇರೆ ಕ್ಷೇತ್ರಗಳ ಸೆಲೆಬ್ರಿಟಿಗಳ ಜತೆಗೆ ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯರಾಗಿರುವ ಸೋನು ಶ್ರೀನಿವಾಸ ಗೌಡ, ಸ್ಪೂರ್ತಿ ಗೌಡ, ಕಿರಣ್ ಯೋಗೇಶ್ವರ್, ಲೋಕೇಶ್, ಉದಯ್ ಸೂರ್ಯ, ಅಕ್ಷತಾ ಕುಕ್ಕಿ, ಜಶ್ವಂತ್-ನಂದು ಮತ್ತು ಜಯಶ್ರೀ ಆರಾಧ್ಯ ಸ್ಪರ್ಧಿಗಳಾಗಿ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ಪೈಕಿ ಕೆಲವರು ‘ಬಿಗ್ ಬಾಸ್’ನ 9ನೇ ಸೀಸನ್​ನಲ್ಲೂ ಭಾಗವಹಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳ ಸೆಲೆಬ್ರಿಟಿಗಳ ಜತೆಗೆ ಇದುವರೆಗೂ ನಡೆದ ಎಂಟು ಸೀಸನ್​ಗಳಲ್ಲಿ ಭಾಗವಹಿಸಿದ್ದ ಕೆಲವು ಪ್ರಮುಖ ಸ್ಪರ್ಧಿಗಳು ಸಹ ಈ ಹೊಸ ಸೀಸನ್​ನಲ್ಲಿ ಭಾಗವಹಿಸುತ್ತಿರುವುದು ವಿಶೇಷ. ಇವರ ಜತೆಗೆ ಈ ಬಾರಿ ಇನ್ನೊಂದಿಷ್ಟು ಹೊಸ ಸ್ಪರ್ಧಿಗಳು ಸೇರಿಕೊಳ್ಳಲಿದ್ದಾರೆ. ಒಟ್ಟಾರೆ ‘ಬಿಗ್ ಬಾಸ್- 9’, ಹಳಬರು ಮತ್ತು ಹೊಸಬರ ಸಮ್ಮಿಲನವಾಗಲಿದೆ.

ಸದ್ಯ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಯಾರ್ಯಾರು ಭಾಗವಹಿಸಬಹುದು ಎಂಬ ಚರ್ಚೆ ಈಗಾಗಲೇ ಶುರುವಾಗಿದೆ. ಈ ಪೈಕಿ, ಇತ್ತೀಚೆಷ್ಟೇ ‘ಜೊತೆಜೊತೆಯಲಿ’ ಧಾರಾವಾಹಿಯಿಂದ ಹೊರಬಂದ ನಟ ಅನಿರುದ್ಧ, ‘ಕಮಲಿ’ ಧಾರಾವಾಹಿಯ ಅಮೂಲ್ಯ ಓಂಕಾರ್ ಗೌಡ ಮುಂತಾದವರು ಹೆಸರುಗಳು ಕೇಳಿಬರುತ್ತಿದೆ. ‘ಬಿಗ್ ಬಾಸ್ - 9’ರ ವಾರಾಂತ್ಯದ ಕಾರ್ಯಕ್ರಮವನ್ನು ಸುದೀಪ್ ಎಂದಿನಂತೆ ನಡೆಸಿಕೊಡಲಿದ್ದಾರೆ.