ಜಿಲ್ಲೆ

ಬಿಡದಿಯಲ್ಲಿ ನಕಲಿ ಮೊಮ್ಮಗಳನ್ನು ಬ್ಯಾಂಕ್​ಗೆ ಕರೆತಂದು 5 ಲಕ್ಷ ರೂ. ಕಬಳಿಸಿದ ದಂಪತಿ! ಇಂಥವರೂ ಇರ್ತಾರೆ ಹುಷಾರ್!

ಬಿಡದಿ(ರಾಮನಗರ): ಅಜ್ಜಿಯೊಬ್ಬರು ಮೊಮ್ಮಗಳ ಹೆಸರಿನಲ್ಲಿ ಬ್ಯಾಂಕ್​ನಲ್ಲಿಟ್ಟಿದ್ದ ಹಣವನ್ನು ಕಬಳಿಸಲು ಅಜ್ಜಿಯ ಸಂಬಂಧಿಕ ದಂಪತಿ ನಕಲಿ ದಾಖಲೆ ಹಾಗೂ ನಕಲಿ ಮೊಮ್ಮಗಳನ್ನು ಬ್ಯಾಂಕ್​ಗೆ ಕರೆತಂದು ಹಣ ವರ್ಗಾವಣೆ ಮಾಡಿಸಿಕೊಂಡಿರುವ ಪ್ರಕರಣ ರಾಮನಗರ ಜಿಲ್ಲೆ ಬಿಡದಿಯಲ್ಲಿ ನಡೆದಿದೆ.

ರಾಮನಹಳ್ಳಿಯ ವೃದ್ಧೆ ನಂಜಮ್ಮ ಅವರು ಬಿಡದಿಯ ಕೆನರಾ ಬ್ಯಾಂಕ್​ನಲ್ಲಿ ಮೊಮ್ಮಗಳು ಜ್ಞಾನೇಶ್ವರಿ ಹೆಸರಿನಲ್ಲಿ 5 ಲಕ್ಷ ರೂ.ಗಳನ್ನು ಠೇವಣಿ ಇಟ್ಟಿದ್ದರು. ನಂತರ ನಂಜಮ್ಮ ಮೃತಪಟ್ಟಿದ್ದರು. ಇದಾದ ಕೆಲ ದಿನಗಳ ನಂತರ ರತ್ಮಮ್ಮ ಮತ್ತು ಜಗದೀಶ್​ ಎಂಬುವರು ಬ್ಯಾಂಕ್​ಗೆ ಜ್ಞಾನೇಶ್ವರಿ ಹೆಸರಿನ ಮಗಳನ್ನು ಕರೆತಂದು ನಂಜಮ್ಮ ಠೇವಣಿಗೆ ಜ್ಞಾನೇಶ್ವರಿ ತಂದೆ ಜಗದೀಶ್​ ಅವರನ್ನು ಮೈನರ್​ ಗಾರ್ಡಿಯನ್​ ಮಾಡಿ ಠೇವಣಿ ಹಣ ವರ್ಗಾವಣೆ ಮಾಡಿ ಎಂದು ಹೇಳಿದ್ದರು. ಅಲ್ಲದೆ ನಂಜಮ್ಮರ ಮರಣ ಪ್ರಮಾಣಪತ್ರ, ಠೇವಣಿ ಹಣದ ಬಾಂಡ್​ನ ನಂಬರ್​ ಸಹಿತ ದಾಖಲೆಗಳನ್ನು ಬ್ಯಾಂಕ್​ಗೆ ನೀಡಿದ್ದರು. ಇದರ ಆಧಾರದ ಮೇಳೆ ದಾಖಲೆಗಳನ್ನು ಪರಿಶೀಲಿಸಿದ ಬ್ಯಾಂಕ್​ ಸಿಬ್ಬಂದಿ ಮೊಮ್ಮಗಳು ಜ್ಞಾನೇಶ್ವರಿ ಹೆಸರಿನಲ್ಲಿ ನಂಜಮ್ಮ ಇಟ್ಟಿದ್ದ 5 ಲಕ್ಷ ರೂ.ಗಳಲ್ಲಿ 4,99,989 ರೂ.ಗಳನ್ನು ಜ್ಞಾನೇಶ್ವರಿ ತಂದೆ ಮೈನರ್​ ಗಾರ್ಡಿಯನ್​ ಜಗದೀಶ್​ ಅವರ ಹೆಸರಿನಲ್ಲಿ ತೆರೆದಿದ್ದ ಜಂಟಿ ಉಳಿತಾಯ ಖಾತೆಗೆ 2022ರ ಜೂನ್​ 23ರಂದು ಹಣ ವರ್ಗಾವಣೆ ಮಾಡಿದ್ದರು.

ಇದಾದ ನಂತರ ಜು.2022ರ ಜುಲೈ 1ರಂದು ಮೃತ ನಂಜಮ್ಮ ಅವರ ಮಗ ಚಂದ್ರಶೇಖರ್​ ಬ್ಯಾಂಕ್​ಗೆ ಬಂದು ನನ್ನ ಮಗಳು ಜ್ಞಾನೇಶ್ವರಿ ಹೆಸರಿನಲ್ಲಿ ತಾಯಿ ಇಟ್ಟಿರುವ ಠೇವಣಿ ಹಣ ಪಡೆಯಲು ಬಂದಿದ್ದರು. ಈ ವೇಳೆ ಬ್ಯಾಂಕ್​ ಸಿಬ್ಬಂದಿ ದಾಖಲೆಗಳ ಪರಿಶೀಲಿಸಿದಾಗ, ರತ್ನಮ್ಮ ಹಾಗೂ ಜಗದೀಶ್​ ಅವರು ಬ್ಯಾಂಕ್​ಗೆ ಸಲ್ಲಿಸಿರುವ ದಾಖಲೆಗಳು ನಕಲಿ ಅಲ್ಲದೆ, ಬ್ಯಾಂಕ್​ಗೆ ಕರೆತಂದಿದ್ದ ಜ್ಞಾನೇಶ್ವರಿಯೂ ನಕಲಿ ಎಂದು ಗೊತ್ತಾಗಿದೆ. ಬಿಡದಿ ಠಾಣೆಯಲ್ಲಿ ರತ್ನಮ್ಮ ಹಾಗೂ ಜಗದೀಶ್​ ವಿರುದ್ಧ ಆ.10ರಂದು ಬ್ಯಾಂಕ್​ ಮ್ಯಾನೇಜರ್​ ಕೇಶವಮೂರ್ತಿ ಪ್ರಕರಣ ದಾಖಲಿಸಿದ್ದಾರೆ. ಬಿಡದಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.