ಜಿಲ್ಲೆ

ಭಾರತಿ ಶೆಟ್ಟಿಗೆ ಒನಕೆ ಓಬವ್ವನ ಪಾತ್ರ! ತೇಜಸ್ವಿನಿಗೌಡ ಆಕ್ಷೇಪ... ಹೊಸ ಸಿನಿಮಾ ಮಾಡುವ ಬಗ್ಗೆ ಸ್ವಾರಸ್ಯಕರ ಚರ್ಚೆ

arunakunigal

ಬೆಂಗಳೂರು: ಭಾರತಿ ಶೆಟ್ಟಿಗೆ ಒನಕೆ ಓಬವ್ವನ ಪಾತ್ರ ನೀಡಿ ಹೊಸದಾಗಿ ಸಿನಿಮಾ ಮಾಡಬೇಕು ಎಂಬ ವಿಷಯ ಪ್ರಸ್ತಾಪವಾಗಿ ಮೇಲ್ಮನೆಯಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು.

ಬಜೆಟ್​ ಕುರಿತು ಚರ್ಚೆ ಮಾಡುತ್ತಿದ್ದ ಭಾರತಿ ಶೆಟ್ಟಿ ಅವರು ವೀರ ರಾಣಿಯರಾದ ಅಬ್ಬಕ್ಕ, ಕೆಳದಿ ಚನ್ನಮ್ಮ, ಒನಕೆ ಓಬವ್ವ ಪ್ರತಿಮೆಗಳನ್ನು ಸ್ಥಾಪಿಸಿ, ಮುಂದಿನ ಪೀಳಿಗೆಗೆ ಅವರ ಶೌರ್ಯ, ದಿಟ್ಟ ಹೋರಾಟಗಳ ಬಗ್ಗೆ ತಿಳಿಸಿಕೊಡಬೇಕಾಗಿದೆ ಎಂದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಧ್ವನಿಗೂಡಿಸಿದರೆ, ಎನ್​.ರವಿಕುಮಾರ್​ ಅವರು ಚಿತ್ರದುರ್ಗದಲ್ಲಿ ಒನಕೆ ಓಬವ್ವಳ 50 ಅಡಿ ಎತ್ತರದ ಪ್ರತಿಮೆ ಸ್ಥಾಪಿಸಬೇಕಾಗಿದೆ ಎಂದಾಗ ಸಭಾಪತಿ ಪೀಠದಲ್ಲಿದ್ದ ತೇಜಸ್ವಿನಿ ಸಹಮತ ವ್ಯಕ್ತಪಡಿಸಿದರು.

ಈ ನಡುವೆ ಬಿಜೆಪಿ ಶಶಿಲ್​ ನಮೋಶಿ ಅವರು ಭಾರತಿಶೆಟ್ಟಿಗೆ ಒನಕೆ ಓಬವ್ವನ ಪಾತ್ರ ನೀಡಿ ಹೊಸದಾಗಿ ಸಿನಿಮಾ ಮಾಡಬೇಕಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ತೇಜಸ್ವಿನಿಗೌಡ, ಅಭಿನಯಶಾರದೆ ಜಯಂತಿ ಆ ಪಾತ್ರಕ್ಕೆ ಜೀವ ತುಂಬಿದ್ದು. ಬೇರೆ ಯಾರಿಂದಲೂ ಸಾಧ್ಯವಾಗದು ಎಂದರು.

ತಟ್ಟನೆ ಎದ್ದುನಿಂತ ಮಾಧುಸ್ವಾಮಿ, ಅವರು ಇನ್ನೂ ಸಿನಿಮಾ ಮಾಡಬೇಕೆಂದಿದ್ದಾರಷ್ಟೇ ಅಷ್ಟರಲ್ಲಾಗಲೆ ಆಕ್ಷೇಪ ಬಂತು ನೋಡಿ ಎನ್ನುತ್ತಾ ಸಭಾಪತಿ ಪೀಠದಲ್ಲಿದ್ದ ತೇಜಸ್ವಿನಿಗೌಡರತ್ತ ನಗೆ ಚಟಾಕಿ ಹಾರಿಸಿದರು.

ಜೆಡಿಎಸ್​ನ ಮರಿತಿಬ್ಬೇಗೌಡರು, ಎರಡು ಜಡೆ ಒಂದಾಗುವುದು ಕಷ್ಟ ಅನ್ನೋ ಮಾತಿದೆ ಎಂದು ನಗುತ್ತಲೇ ಹೇಳಿದರು. ಪುರುಷರು ಹೊರಗೆ ಹುಲಿ, ಮನೆಯೊಳಗೆ ಇಲಿ ಎಂದು ಬಿಜೆಪಿಯ ಎಂ.ಕೆ.ಪ್ರಾಣೇಶ್​ ಧ್ವನಿ ಸೇರಿಸಿದರು.

ಹೀಗೆ ಉಬ್ಬಿಸಿದರೆ ನಾವೇನೂ ಉಬ್ಬುವುದಿಲ್ಲ, ನಮಗೆ (ಮಹಿಳೆಯರು) ಶೇ.50 ರಾಜಕೀಯ ಮೀಸಲು ಸಿಗುವ ತನಕ ಪ್ರಯತ್ನ ನಿಲ್ಲಿಸುವುದಿಲ್ಲ ಎಂದು ತೇಜಸ್ವಿನಿಗೌಡ ನಗುತ್ತಲೇ ಹೇಳಿ ಚರ್ಚೆಗೆ ತೆರೆ ಎಳೆದರು. ಅಂದಹಾಗೆ ಈ ಸ್ವಾರಸ್ಯಕರ ಚರ್ಚೆ ನಡೆದದ್ದು ಗುರುವಾರ.