ಬೆಂಗಳೂರು: ಕರೊನಾ ಮತ್ತು ರೂಪಾಂತರಿ ಒಮಿಕ್ರಾನ್ ಸೋಂಕಿನ ಭೀತಿ ನಡುವೆಯೂ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಸೋಮವಾರ (ನ.29) ಚಾಲನೆ ಸಿಗಲಿದೆ. 3 ದಿನ (ಡಿ.1ರವರೆಗೆ) ನಡೆಯುವ ಪರಿಷೆಗೆ ಸಿದ್ಧತೆಗಳು ಪೂರ್ಣಗೊಂಡಿದ್ದು, ಭಾನುವಾರವೇ ಜಾತ್ರೆಯ ವಾತಾವರಣ ನಿರ್ಮಾಣಗೊಂಡಿದೆ. ಜಾತ್ರೆ ನಡೆಯುವ ಸ್ಥಳದಲ್ಲೇ ಕರೊನಾ ಟೆಸ್ಟ್ ಮಾಡಲು ಮತ್ತು ಕರೊನಾ ವ್ಯಾಕ್ಸಿನ್ ಹಾಕುವ ಕಾರ್ಯವೂ ನಡೆಯಲಿದೆ.
ದೊಡ್ಡ ಗಣಪತಿ ದೇವ ಸ್ಥಾನದಿಂದ ರಾಮಕೃಷ್ಣ ಆಶ್ರಮ ವೃತ್ತದ ವರೆಗೂ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಪರಿಷೆಯಲ್ಲಿ ವಿವಿಧ ತಳಿಯ ಕಡಲೆಕಾಯಿಯ ವ್ಯಾಪಾರ ವಹಿವಾಟು ನಡೆಯಲಿದೆ. ಪರಿಷೆಗೆ ಬರುವ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಿಕೆಯನ್ನ ಮರೆಯುವಂತಿಲ್ಲ. ಪರಿಷೆಯ ಗುಂಗಿನಲ್ಲಿ ಮಾಸ್ಕ್ ಮರೆತು ಬಂದವರಿಗೆ ದಂಡ ವಿಧಿಸಿ ಹೊರ ಕಳಿಸಲಾಗುತ್ತದೆ ಎಚ್ಚರ. ಇನ್ನು ಪರಿಷೆಯಲ್ಲಿ ಪ್ಲಾಸ್ಟಿಕ್ ಕೈಚೀಲ ಬಳಕೆ ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ಚೀಲದಲ್ಲಿ ಕಡಲೆಕಾಯಿ ನೀಡುವುದು ಕಂಡು ಬಂದರೆ ದಂಡ ವಿಧಿಸಲಾಗುವುದು ಎಂದು ವರ್ತಕರಿಗೆ ಅಧಿಕಾರಿಗಳು ಎಚ್ಚರಿಸಿದ್ದಾರೆ.