ಬೆಳಗಾವಿ: ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತೆ ನವ್ಯಶ್ರೀ ರಾವ್ರನ್ನು ಸೋಮವಾರ ಬೆಳಗ್ಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಧ್ವಜಾರೋಹಣ ವೇಳೆ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರ ಎದುರು ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದ ನವ್ಯಶ್ರೀಯನ್ನು ಬೆಳಗಾವಿ ನಗರದ ರಾಮದೇವ ಹೋಟೆಲ್ ಬಳಿ ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆಯಲಾಗಿದೆ.
ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆಯನ್ನು ಬಂಧಿಸಬೇಕು. ಆತನಿಂದ ನನಗೆ ಅನ್ಯಾಯ ಆಗಿದೆ ಎಂದು ಆಗ್ರಹಿಸಿ ಮನವಿ ನೀಡಲು ಆಗಮಿಸುತ್ತಿದ್ದ ನವ್ಯಶ್ರೀ ಮಾರ್ಗದಲ್ಲೇ ಪೊಲೀಸರು ತಡೆದಿದ್ದಾರೆ.
ಕಳೆದ ತಿಂಗಳು ನವ್ಯಶ್ರೀ ವಿರುದ್ಧ ಹನಿಟ್ರ್ಯಾಪ್ ಆರೋಪ ಕೇಳಿಬಂದಿತ್ತು. ಖಾಸಗಿ ವಿಡಿಯೋ ಕೂಡ ವೈರಲ್ ಆಗಿತ್ತು. ಹಣಕ್ಕಾಗಿ ನವ್ಯಶ್ರೀ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾಳೆ ಎಂದು ರಾಜಕುಮಾರ ಟಾಕಳೆ ಬೆಳಗಾವಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದಾದ ಮೂರ್ನಾಲ್ಕು ದಿನದ ಬಳಿಕ ನವ್ಯಶ್ರೀ ಕೂಡ ಪ್ರತಿ ದೂರು ನೀಡಿದ್ದರು. ಟಾಕಳೆ ನನ್ನ ಗಂಡ. ನನಗೆ ಮೋಸ ಮಾಡಿದ್ದಾರೆ. ನನ್ನ ನಂಬಿಕೆಗೆ ಘಾಸಿ ಮಾಡಿದ್ದಾರೆ ಎಂದು ಕಣ್ಣೀರಿಟ್ಟಿದ್ದರು. ಚನ್ನಪಟ್ಟಣದ ಮಹಾನಾಯಕನೊಬ್ಬ ನನ್ನ ರಾಜಕೀಯ ಜೀವನ ಹಾಳು ಮಾಡುವ ಉದ್ದೇಶದಿಂದ ಹೀಗೆಲ್ಲ ಮಾಡಿಸಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದರು. ಅಷ್ಟೇ ಅಲ್ಲ, ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಟಾಕಳೆ ವಿರುದ್ಧ ಅತ್ಯಾಚಾರ ದೂರನ್ನೂ ದಾಖಲಿಸಿದ್ದರು.
ಇದೀಗ ಅತ್ಯಾಚಾರ ಆರೋಪ ಎದುರಿಸುತ್ತಿರುವ ರಾಜಕುಮಾರ ಟಾಕಳೆಯ ಬಂಧನಕ್ಕೆ ಪಟ್ಟು ಹಿಡಿದಿರುವ ನವ್ಯಶ್ರೀ, ಪ್ರತಿಭಟನೆಗೆ ಮುಂದಾಗಿದ್ದರು. ಮುಂಜಾಗ್ರತಾ ಕ್ರಮವಾಗಿ ನವ್ಯಶ್ರೀಯನ್ನು ವಶಕ್ಕೆ ಪಡೆದ ಪೊಲೀಸರು ಬೆಳಗಾವಿ ಮಹಿಳಾ ಠಾಣೆಗೆ ಕರೆದೊಯ್ದರು(ದಿಗ್ವಿಜಯ ನ್ಯೂಸ್).