ಸಾಂದರ್ಭಿಕ ಚಿತ್ರ 
ಜಿಲ್ಲೆ

ಕೆಲಸದಾಕೆ ಮೇಲೆ ಮಗನ ಕಣ್ಣೆದುರಲ್ಲೇ ತೋಟದ ಮಾಲೀಕನಿಂದ ಅತ್ಯಾಚಾರ!

ಚಿಕ್ಕೋಡಿ: ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ದಿನದಿಂದ ಹೆಚ್ಚುತ್ತಲೇ ಇದೆ. ಇದೀಗ ಮತ್ತೊಂದು ಕೇಸ್​ ದಾಖಲಾಗಿದೆ.

ತೋಟದಲ್ಲಿ ಕೆಲಸಕ್ಕಿದ್ದ ಮಹಿಳೆ ಮೇಲೆ ಮಾಲೀಕನಿಂದಲೇ ಅತ್ಯಾಚಾರ ನಡೆದಿದೆ ಎಂದು ಗೋಕಾಕ್ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸೆ. 17ರ ರಾತ್ರಿ ನಡೆದ ಘಟ‌‌ನೆ ತಡವಾಗಿ ಬೆಳಕಿಗೆ ಬಂದಿದೆ.

ಸಿದ್ದಪ್ಪ ಕೋಟೂರ್​ ಎಂಬುವರ ತೋಟದಲ್ಲಿ ಸಂತ್ರಸ್ತೆ ಕುಟುಂಬ ಕೂಲಿ ಕೆಲಸ ಮಾಡಿಕೊಂಡು ಅಲ್ಲೇ ಶೆಡ್​ನಲ್ಲಿ ವಾಸವಿದೆ. ಸಂತ್ರಸ್ತೆಯ ಪತಿ ಮನೆಯಿಂದ ಹೊರ ಹೋದಾಗ ಅಲ್ಲಿಗೆ ಬಂದ ಜಮೀನು ಮಾಲೀಕನು ತನ್ನ ಸಹಚರನನ್ನು ಶೆಡ್‌ನ ಕಾವಲಿಗಿರಿಸಿ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಇದನ್ನು ತಡೆಯಲು ಬಂದ ಮಹಿಳೆಯ 5 ವರ್ಷದ ಮಗನನ್ನೂ ತಳ್ಳಿದ ಜಮೀನು ಮಾಲೀಕ ಕೃತ್ಯ ವೆಸಗಿದ್ದಾನೆ. ಈ ವಿಚಾರವನ್ನ ಯಾರಿಗಾದರೂ ಹೇಳಿದ್ರೆ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಶೆಡ್​ನ ಕಾವಲಿಗಿದ್ದ ವ್ಯಕ್ತಿಯೂ ಜೀವ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆಯು ಗೋಕಾಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೊಲೀಸರು ಜಮೀನು ಮಾಲೀಕ ಮತ್ತು ಆತನ ಸಹಚರನ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.