

ಬೆಂಗಳೂರು: ಮಗನನ್ನು ಅಡ್ಮಿಷನ್ ಮಾಡಲು ಬಂದು ಮಹಿಳೆಯೊಬ್ಬರ ಬಳಿ ಮುಖ್ಯಶಿಕ್ಷಕ ಶಾಲೆಯಲ್ಲೇ ಶರ್ಟ್ ಬಿಚ್ಚಿ ಮಸಾಜ್ ಮಾಡಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ.
ಇಂತಹ ಘಟನೆ ಬೆಂಗಳೂರಿನ ಕೋದಂಡರಾಮಪುರದ ಬಿಬಿಎಂಪಿ ಶಾಲೆಯಲ್ಲಿ ಸಂಭವಿಸಿದೆ. ವಿದ್ಯಾದೇಗುಲದಲ್ಲಿ ಅನುಚಿತವಾಗಿ ವರ್ತಿಸಿದ ಆ ಶಿಕ್ಷಕನ ಹೆಸರು ಲೋಕೇಶಪ್ಪ.
ಮಹಿಳೆಯೊಬ್ಬರು ಮಗನ್ನು ಶಾಲೆಗೆ ಸೇರಿಸಲು ಬಂದಿದ್ದರು. ಈ ವೇಳೆ ನೀವು ಏನು ಕೆಲ್ಸ ಮಾಡ್ತಿರೋದು? ಎಂದು ಶಿಕ್ಷಕ ಕೇಳಿದ್ದು, ಬ್ಯೂಟಿ ಪಾರ್ಲರ್ ನಡೆಸುತ್ತಿರುವುದಾಗಿ ಬಾಲಕನ ತಾಯಿ ತಿಳಿಸಿದ್ದಾರೆ. 'ಹಾಗಾದ್ರೆ ನನಗೂ ಮಸಾಜ್ ಮಾಡಿ ಎಂದು ಮುಖ್ಯಶಿಕ್ಷಕ ಲೋಕೇಶಪ್ಪ ಕೇಳಿದ್ದು, ಮುಜುಗರಕ್ಕೀಡಾಗಿ ಮಹಿಳೆ ನಿರಾಕರಿಸಿದ್ದಾರೆ. ಆದರೂ ಒತ್ತಾಯ ಮಾಡಿದ ಮುಖ್ಯಶಿಕ್ಷಕ ಸಿಬ್ಬಂದಿಯನ್ನು ಹೊರಗೆ ಕಳುಹಿಸಿ ಶಾಲೆಯ ಕೋಣೆಯೊಂದರಲ್ಲಿ ಶರ್ಟ್ ಬಿಚ್ಚಿ ಮಲಗಿದ್ದಾನೆ. ಅನಿವಾರ್ಯವಾಗಿ ಆ ಮಹಿಳೆ ಮಸಾಜ್ ಮಾಡಿ ಮುಜುಗರದಿಂದಲೇ ಹೊರ ಹೋಗಿದ್ದಾರೆ.
ಮಸಾಜ್ ಮಾಡಿಸಿಕೊಳ್ಳುತ್ತಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ. ಮುಖ್ಯಶಿಕ್ಷಕನ ಅನುಚಿತ ವರ್ತನೆ ವಿರುದ್ಧ ಸಿಬ್ಬಂದಿ ಸೊಲ್ಲೆತ್ತದೆ ಮೌನ ವಹಿಸಿದ್ದಾರೆ. ಈ ಶಾಲೆಯಲ್ಲಿ ಬಹುತೇಕ ಹೊರಗುತ್ತಿಗೆ ಶಿಕ್ಷಕರೇ ಇದ್ದಾರೆ. ಮುಖ್ಯಶಿಕ್ಷಕನ ನಡೆಯನ್ನ ಪ್ರಶ್ನಿಸಿದ್ರೆ ಕೆಲಸಕ್ಕೆ ಕುತ್ತು ಬಂದೀತು ಎಂಬ ಭಯಕ್ಕೆ ಸುಮ್ಮನಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿಂದಿನ ಶಾಲೆಗಳಲ್ಲೂ ಲೋಕೇಶಪ್ಪ ಇಂತದ್ದೇ ಅನುಚಿತ ವರ್ತನೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ. ಸೆಕ್ಯೂರಿಟಿ ಮಗಳೊಂದಿಗೂ ಕಾಮಚೇಷ್ಟೆ ಮಾಡಲು ಹೋಗಿದ್ದನಂತೆ. ಹಾಲುಣಿಸುತ್ತಿದ್ದ ಮಹಿಳೆಯೊಬ್ಬರ ಅಂಗಾಂಗ ಮುಟ್ಟಿ ಕಾಮಚೇಷ್ಟೆ ಮಾಡಿದ್ದ ಎನ್ನುವ ಆರೋಪವೂ ಕೇಳಿಬಂದಿದೆ.
ಶಾಲೆಯಲ್ಲಿ ಮಸಾಜ್ ಮಾಡಿಸಿಕೊಂಡ ಪ್ರಕರಣ ಸಂಬಂಧ ಆರೋಪಿ ಲೋಕೇಶಪ್ಪನಿಗೆ ಬಿಬಿಎಂಪಿ ಶಿಕ್ಷಣ ವಿಭಾಗದ ವಿಶೇಷ ಆಯುಕ್ತರು ನೋಟಿಸ್ ಜಾರಿ ಮಾಡಿದ್ದಾರೆ. ಪ್ರೌಢಶಾಲೆಯ ಸರ್ಕಾರಿ ಕಟ್ಟಡವನ್ನು ಖಾಸಗಿ ಕೆಲಸಕ್ಕೆ ಬಳಸಿಕೊಂಡ ಹಾಗೂ ಸರ್ಕಾರಿ ಕೆಲಸದ ಸಮಯದಲ್ಲಿ ಕರ್ತವ್ಯ ಲೋಪ ಎಸಗಿದ ಹಿನ್ನೆಲೆ ಕರ್ನಾಟಕ ನಾಗರೀಕ ನಿಯಮಾವಳಿಗಳನ್ವಯ ಈ ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ವಿಚಾರಣೆ ನಿರೀಕ್ಷಿಸಿ, ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.