ಜಿಲ್ಲೆ

ದೇಶದ ಎಲ್ಲ ಹೆಣ್ಣು ಮಕ್ಕಳ ಬಳಿ ಕ್ಷಮೆಯಾಚಿಸಿದ ರಮೇಶ್​: ಲೋಕಸಭೆಯಲ್ಲೂ ಪ್ರತಿಧ್ವನಿಸಿದ ವಿವಾದಾತ್ಮಕ ಹೇಳಿಕೆ

arunakunigal

ಬೆಳಗಾವಿ: ನಾನು ಆ ಸಂದರ್ಭದಲ್ಲಿ ಮಾತನಾಡಿದ ಆ ಮಾತಿನಿಂದ ಸಮಾಜದ ಎಲ್ಲ ವರ್ಗದವರಿಗೆ ನೋವಾಗಿದ್ದರೆ, ಅದರಲ್ಲೂ ವಿಶೇಷವಾಗಿ ಮಹಿಳಾ ವರ್ಗಕ್ಕೆ ಬೇಸರ ಆಗಿದ್ದರೆ ನಾನು ಪ್ರಾಮಾಣಿಕವಾಗಿ ಕ್ಷಮೆ ಕೋರುತ್ತೇನೆ ಎಂದು ವಿಧಾನಸಭೆ ಮಾಜಿ ಸಭಾಧ್ಯಕ್ಷ ರಮೇಶ್​ ಕುಮಾರ್​ ಮನವಿ ಮಾಡಿದರು.

ಶುಕ್ರವಾರ ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಕ್ಷಮೆ ಕೋರಿದ ರಮೇಶ್​ ಕುಮಾರ್​, ಲಘುವಾಗಿ ವರ್ತಿಸುವ ಉದ್ದೇಶ ನನ್ನದಾಗಿಲ್ಲ. ದೇಶದ ಎಲ್ಲ ಮಹಿಳಾ ಕುಲಕ್ಕೆ ನಾನು ಕ್ಷಮೆ ಕೇಳುತ್ತೇನೆ. ನನಗೆ ಯಾವ ಪ್ರತಿಷ್ಟೆಯೂ ಇಲ್ಲ. ನಾನು ಪ್ರಾಮಾಣಿಕವಾಗಿ ಕ್ಷಮೆಯನ್ನು ಕೋರುತ್ತೇನೆ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಮುಕ್ತ ಮನಸ್ಸಿನಿಂದ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.

ಬೆಳಗಾವಿ ಅಧಿವೇಶನದಲ್ಲಿ ಗುರುವಾರ ಪ್ರವಾಹದ ಹಾನಿ ಕುರಿತ ಚರ್ಚಿಸುವ ವೇಳೆ ರಮೇಶ್​ ಕುಮಾರ್​, "ದೇರ್​ ಈಸ್​ ಎ ಸೇಯಿಂಗ್​, ವ್ಹೆನ್​ ರೇಪ್​ ಈಸ್​ ಇನ್ನೆವಿಟಬಲ್​ ಲೆಟ್ಸ್​ ಲೇ ಡೌನ್​ ಆ್ಯಂಡ್​ ಎಂಜಾಯ್​. ದಾಟ್ಸ್​ ದಿ ಪೊಸಿಷನ್​ ಟು ವಿತ್​ ಯುವ್​ ಆಲ್​" (ಹೀಗೊಂದು ಮಾತಿದೆ, ಅತ್ಯಾಚಾರ ಅನಿವಾರ್ಯವಾಗಿದ್ದರೆ, ಆಸ್ವಾದಿಸಿ. ಅಂತಹ ಸ್ಥಿತಿಯಲ್ಲಿ ನಿಮ್ಮೊಂದಿಗೆ ನಾವೂ ಇದ್ದೇವೆ.) ಎಂದಿದ್ದರು. ಇದಕ್ಕೆ ಪ್ರತಿಯಾಗಿ ಸ್ಪೀಕರ್​ ಕೂಡ ನಕ್ಕಿದ್ದರು. ಈ ಮಾತಿಗೆ ರಾಜ್ಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಲೋಕಸಭೆಯಲ್ಲೂ ಕೇಂದ್ರ ಸಚಿವ ಸ್ಮೃತಿ ಇರಾನಿ ಈ ಮಾತನ್ನ ಪ್ರಸ್ತಾಪಿಸಿ ಖಂಡಿಸಿದ್ದಾರೆ. ಇದು ಕಾಂಗ್ರೆಸ್​ಗೆ ಭಾರಿ ಮುಜುಗರ ತಂದೊಡ್ಡಿದೆ.

ಇನ್ನು ಕಲಾಪದಲ್ಲಿ ರಮೇಶ್​ಕುಮಾರ್​ ಕ್ಷಮೆ ಕೇಳಿದ ಬಳಿಕ ದಯವಿಟ್ಟು ಇದನ್ನು ಬೆಳೆಸೋದು ಬೇಡ. ಇಲ್ಲಿಗೆ ಬಿಟ್ಟುಬಿಡಿ ಎಂದು ಸ್ಪೀಕರ್​ ವಿಶ್ವೇಶ್ವರ ಗೆಹಡೆ ಕಾಗೇರಿ ಮನವಿ ಮಾಡಿದರು.