ಬೆಂಗಳೂರು: ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣದ ಆರೋಪಿಗಳಿಬ್ಬರನ್ನು ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ಪೀಟರ್ ಮತ್ತು ಸೂರ್ಯ ಬಂಧಿತರು. ಇವರಿಬ್ಬರೂ ರೇಖಾಗೆ ಬಾಡಿಗಾರ್ಡ್ನಂತೆ ಸಹಚರರಾಗಿದ್ದವರು.
ಕರೊನಾ ಹಿನ್ನೆಲೆ ಬಡ ಜನರಿಗೆ ತನ್ನ ಕಚೇರಿ ಬಳಿ ರೇಖಾ ಊಟ ವಿತರಿಸುತ್ತಿರುವಾಗಲೇ ಅಲ್ಲಿಗೆ ಬಂದ ದುಷ್ಕರ್ಮಿಗಳು ಗುರುವಾರ ಬೆಳಗ್ಗೆ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಇದು ರೇಖಾರ ಸಹಚರರಿಂದಲೇ ನಡೆದ ಕೊಲೆ ಎಂಬ ಅನುಮಾನ ದಟ್ಟವಾಗಿತ್ತು. ಪೊಲೀಸರು ಕೊಲೆ ನಡೆದ ರಾತ್ರಿಯೇ 50ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದರು. ಮೊದಲ ಹಂತದ ವಿಚಾರಣೆ ಬಳಿಕ 39 ಜನರನ್ನು ವಶದಲ್ಲಿಟ್ಟುಕೊಂಡು ವಿಚಾರಣೆ ನಡೆಸುವಾಗ ಪೀಟರ್ ಜತೆ ಸಂಪರ್ಕ ಹೊಂದಿದ್ದ ವ್ಯಕ್ತಿ ಪತ್ತೆಯಾಗುತ್ತಿದ್ದಂತೆ ಪೀಟರ್ ಮತ್ತು ಸೂರ್ಯನಿಗಾಗಿ ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸಿದ್ದರು. ಕೊಲೆ ಆದಾಗಿಂದ ಆರೋಪಿಗಳು ಒಂದು ಕಡೆ ನಿಲ್ಲದೆ ಆಟೋವೊಂದರಲ್ಲಿ ಕೂತು ತಿರುಗುತ್ತಲೇ ಇದ್ದರು. ಇದನ್ನು ಓದಿರಿ ವಿಷ ಕುಡಿದು ಪ್ರಿಯಕರನ ಮಡಿಲಲ್ಲೇ ರಕ್ತಕಾರಿ ಪ್ರಾಣಬಿಟ್ಟ ಪ್ರೇಯಸಿ! ಇವರಿಬ್ಬರ ಕಥೆ ಭಯಾನಕ
ಆರೋಪಿ ಪೀಟರ್ ಮೇಲೆ 3 ಕೊಲೆ, 1 ಹಲ್ಲೆ, 1 ಡಕಾಯಿತಿಗೆ ಯತ್ನ ಪ್ರಕರಣಗಳು ಇವೆ. ಮತ್ತೊಬ್ಬ ಆರೋಪಿ ಸೂರ್ಯನ ಮೇಲಿದೆ 2 ಕೊಲೆ, 2 ಕೊಲೆಯತ್ನ ಪ್ರಕರಣ.
ರೇಖಾ ಕದಿರೇಶ್ ಕೊಲೆ ಪ್ರಕರಣದ ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಆದೇಶಿಸಿದ್ದರು. ಆರೋಪಿಗಳ ಪತ್ತೆಗಾಗಿ ಆರು ವಿಶೇಷ ತಂಡ ರಚನೆ ಮಾಡಲಾಗಿತ್ತು. ಡಿಸಿಪಿ ಸಂಜೀವ್ ಪಾಟೀಲ್ ನೇತೃತ್ವದಲ್ಲಿ ಪಶ್ಚಿಮ ವಿಭಾಗದ ಎಲ್ಲ ಪೊಲೀಸರು ಅರ್ಲಟ್ ಆಗಿದ್ದರು. ಇಂದು ಬೆಳಗ್ಗೆ ಕಾಮಾಕ್ಷಿಪಾಳ್ಯ ಬಜಾಜ್ ಮೈದಾನ ಬಳಿ ತಲೆಮರೆಸಿಕೊಂಡಿರುವ ಮಾಹಿತಿ ಸಿಕ್ಕಿದ್ದು, ಸ್ಥಳಕ್ಕೆ ತೆರಳಿ ಪೀಟರ್ ಹಾಗೂ ಸೂರ್ಯ ನನ್ನು ಬಂಧಿಸಲಾಗಿದೆ, ಈ ವೇಳೆ ನಮ್ಮ ಸಿಬ್ಬಂದಿ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದರು. ಪ್ರಾಣ ರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಗುಂಡು ಹೊಡೆಯಲಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿಖರವಾಗಿ ಯಾವ ವಿಚಾರಕ್ಕಾಗಿ ಕೊಲೆ ಮಾಡಿದ್ದಾರೆ ಎಂಬುದರ ಬಗ್ಗೆ ತಿಳಿದುಬಂದಿಲ್ಲ. ಕೊಲೆ ಪ್ರಕರಣದಲ್ಲಿ ಹಲವರು ಭಾಗಿಯಾಗಿದ್ದಾರೆ. ಆರೋಪಿಗಳಿಗೆ ಸಹಾಯ ಮಾಡಿದವರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದರು.