ಜಿಲ್ಲೆ

ಮದ್ವೆಗೂ ಮುನ್ನ ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿದ, ಈಗ ಹಿಂಸಿಸುತ್ತಿದ್ದಾನೆ... ಕಿರುತೆರೆ ನಟಿ ದೂರು

arunakunigal

ಬೆಂಗಳೂರು: ನನ್ನ ಮೇಲೆ ಮದುವೆಗೂ ಮುನ್ನವೇ ನನ್ನ ಗಂಡ ಅತ್ಯಾಚಾರವೆಸಗಿದ್ದ. ಮದುವೆ ಆಗ್ತೀನಿ ಎಂದು ಪದೇಪದೆ ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದ. ನಾನು ಒತ್ತಾಯ ಮಾಡಿದ್ದಕ್ಕೆ ಕೊನೆಗೂ ನನ್ನ ಕುತ್ತಿಗೆಗೆ ತಾಳಿ ಕಟ್ಟಿದ. ಇದೀಗ ನನ್ನನ್ನು ಮದುಯೇ ಆಗಿಲ್ಲ ಎನ್ನುತ್ತಿದ್ದಾನೆ. ಅಷ್ಟೇ ಅಲ್ಲ 'ನೀನು ವೇಷ್ಯೆ' ಎಂದು ಬೈಯುತ್ತಾ ಚಿತ್ರಹಿಂಸೆ ಕೊಡುತ್ತಿದ್ದಾನೆ. ಕೋಟಿಗಟ್ಟಲೇ ವರದಕ್ಷಿಣೆ ಹಣ ಕೊಡು ಎಂದು ಪ್ರತಿನಿತ್ಯ ಹಿಂಸೆ ಕೊಡುತ್ತಿದ್ದಾನೆ. ಈ ಹಿಂಸೆಯನ್ನ ನನ್ನಿಂದ ಸಹಿಸೋಕೆ ಆಗ್ತಿಲ್ಲ... ಗಂಡನ ಕುಟುಂಬಸ್ಥರು ಜೀವ ಬೆದರಿಕೆ ಹಾಕಿದ್ದಾರೆ... ಎಂದು ಕಿರುತೆರೆ ನಟಿಯೊಬ್ಬರು ಬಸವನಗುಡಿ ಮಹಿಳಾ‌ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಗಂಡನಿಂದ ಅನುಭವಿಸಿದ ನೋವನ್ನು 8 ಪುಟಗಳ ದೂರಿನ ಪತ್ರದಲ್ಲಿ ಕಿರುತೆರೆ ನಟಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. 'ಮೊದಲು ಸೋಷಿಯಲ್​ ಮೀಡಿಯಾದಲ್ಲಿ ನಮ್ಮಿಬ್ಬರಿಗೂ ಪರಿಚಯವಾಗಿತ್ತು. ಬಳಿಕ ಗ್ರಾಮೀಣ‌ ಪ್ರತಿಭೆ ಬೆಳೆಯಬೇಕು ಎಂದು ನನ್ನೊಂದಿಗೆ ಆಪ್ತವಾಗಿದ್ದ. ಒಂದು ದಿನ ಏಕಾಏಕಿ ಭೇಟಿ ಮಾಡಬೇಕು ಎಂದ. ಕರೊನಾ ಹಿನ್ನೆಲೆ ಹೊರಗೆ ಹೋಗುವುದು ಕಷ್ಟ ಎಂದು ನಾನು ಹೇಳಿದ್ದೆ. ಅದಕ್ಕೆ ಆತ ನಿಮ್ಮ ಮನೆಯಲ್ಲೇ ಭೇಟಿಯಾಗೋಣ ಎಂದಿದ್ದ. ಮನೆಗೆ ಬಂದಾಗ ಲಾಕ್​ಡೌನ್ ಜಾರಿ ಆದ್ರೆ ಏನು ಮಾಡುವುದು ಎಂದು ನಾನು ಕೇಳಿದ್ದೆ. ಅದಕ್ಕೆ ಆತ, ಮನೆಯಲ್ಲೇ ನಾವು ಲಾಕ್ ಆಗೋಣ ಅಂತ ಹೇಳಿದ್ದ. ಅದರಂತೆ ಆತ ನಮ್ಮ ಮನೆಗೆ ಬಂದಿದ್ದ. ಆ ವೇಳೆ ಏಕಾಏಕಿ ನನ್ನ ಬಾಯಿಯನ್ನು ಬಲವಂತವಾಗಿ ಮುಚ್ಚಿ ಅತ್ಯಾಚಾರ ಮಾಡಿಬಿಟ್ಟ. ಆಗ ನಾನು ಅಳುತ್ತಿದ್ದೆ. ಯಾಕೆ‌‌ ಅಳುತ್ತೀಯಾ? ನಾವಿಬ್ಬರೂ ಮದುವೆ ಆಗೋಣ ಎಂದಿದ್ದ. ಇದಾದ ಬಳಿಕ ಹಲವು ಬಾರಿ ಮನೆಗೆ ಬಂದಾಗಲೆಲ್ಲ ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದ. ಇಷ್ಟೆಲ್ಲ ಮುಗಿದ ಮೇಲೆ ಮದುವೆ ಆಗೋಣ ಅಂದೆ. ಅದಕ್ಕೆ ಆತ, ಈಗಾಗಲೇ ನಮಗೆ ಮದುವೆ ಆಗಿದೆ ಅಂದುಕೊಂಡಿದ್ದೇನೆ ಎಂದು ನಂಬಿಸಿದ್ದ. ಇದೇ ರೀತಿ ಹೇಳುತ್ತಾ ನನ್ನೊಂದಿಗೆ ಹಲವು ಬಾರಿ ಲೈಂಗಿಕ ಸಂಪರ್ಕ ಬೆಳೆಸಿದ್ದ. ಈ ವೇಳೆ ನನ್ನ ‌ಆರೋಗ್ಯದಲ್ಲಿ ಏರುಪೇರಾಯ್ತು. ಆಗ ನನ್ನ‌ ಫ್ಯಾಮಿಲಿ ವೈದ್ಯರನ್ನು ‌ಸಂಪರ್ಕಿಸಿ ಚಿಕಿತ್ಸೆ ಪಡೆದಿದ್ದೆ. ಇದಾದ ಕೆಲ ತಿಂಗಳ ಬಳಿಕ ಮದುವೆ ಆಗು ಎಂದು ಕೇಳಿದೆ. ಆಗ ನಿಧಾನವಾಗಿ ನನ್ನನ್ನು ದೂರ ಮಾಡಲಾರಂಭಿಸಿದ. ಸೋಷಿಯಲ್​ ಮೀಡಿಯಾ, ಮೊಬೈಲ್​ನಲ್ಲಿ ನನ್ನ ನಂಬರ್​ ಅನ್ನು ಬ್ಲಾಕ್ ಮಾಡಿದ್ದ. ಇದೇ ವಿಚಾರವಾಗಿ ನಾನು ಗಲಾಟೆ ಮಾಡಿದ್ದೆ. ಕೊನೆಗೆ ಮದುವೆ ಆಗಲ್ಲ ಎಂದುಬಿಟ್ಟ. ಇದೇ ವಿಚಾರವಾಗಿ ಚಂದ್ರಾಲೇಔಟ್ ಬಳಿ ದೇವಸ್ಥಾನದಲ್ಲಿ ಗೆಳೆಯರ ಜತೆ ಮಾತುಕತೆ ಆಯ್ತು. ಆಗ ಸ್ಥಳದಲ್ಲೇ ಮದುವೆ ಮಾಡಿಕೋ ಎಂದು ನನ್ನ ಕುತ್ತಿಗೆಗೆ ಆತ ತಾಳಿ ಕಟ್ಟಿದ' ಎಂದು ಸಂತ್ರಸ್ತೆ ವಿವರಿಸಿದ್ದಾರೆ.

'ಮದುವೆ ಆದ ಬಳಿಕ ಇಬ್ಬರೂ ಆತನ ಮನೆಗೆ ಹೋದೆವು. ಮನೆಯವರ ಮುಂದೆ ಮದುವೆ ಆಗಿಲ್ಲ ಎಂದು ಉಲ್ಟಾ ಹೊಡೆದ. ಇದೇ ವಿಚಾರವಾಗಿ ಗಲಾಟೆ ನಡೆದು ಕೋಲಾರದಲ್ಲೂ ದೂರು ದಾಖಲಿಸಿದ್ದೆ. ಅವರ ಮನೆಗೆ ಹೋದ ಮೊದಲ ದಿನವೇ ವರದಕ್ಷಿಣೆ ತರುವಂತೆ ಒತ್ತಾಯ ಮಾಡಿದ್ರು. ನನ್ನ ಜಾತಿಯನ್ನ ನಿಂದಿಸಿ, ವಾಪಸ್ ಹೋಗುವಂತೆ ಅವಮಾನ ಮಾಡಿ ಕೋಟಿ ಕೋಟಿ ವರದಕ್ಷಿಣೆ ತರುವಂತೆ ಹೇಳಿದ್ರು. ''ನೀನು ವೇಷ್ಯೆ'' ಎಂದು ನನಗೆ ಬೈದು ನನ್ನ ಗೌರವಕ್ಕೆ ಧಕ್ಕೆ ತಂದರು. ನನ್ನ ಗಂಡನ ತಂದೆ 'ನಿನ್ನನ್ನು ಹತ್ಯೆ ಮಾಡಿ ರೈಲ್ವೆ ಟ್ರ್ಯಾಕ್‌ ಮೇಲೆ ಹಾಕುತ್ತೇನೆ' ಎಂದು ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ಜರುಗಿಸಿ ನನಗೆ ನ್ಯಾಯ ಒದಗಿಸಿ' ಎಂದು ಕಿರುತೆರೆ ನಟಿ ದೂರಿನಲ್ಲಿ ಮನವಿ ಮಾಡಿದ್ದಾರೆ. ಆರೋಪಿಗಳ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಸಂತ್ರಸ್ತೆಗೆ ನೀಡಿರುವ‌ ಚಿಕಿತ್ಸೆ ಸಂಬಂಧ‌ ಮಾಹಿತಿ ಕೋರಿ ಆಕೆಯ ಫ್ಯಾಮಿಲಿ ವೈದ್ಯರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.