ಜಿಲ್ಲೆ

ಬೂಟ್ ಪಾಲೀಶ್ ಚಳವಳಿಗೆ ಅಶ್ವಿನಿ ಗೌಡ ಎಂಟ್ರಿ: ಪಾದಚಾರಿಗಳ ಶೂ ಪಾಲೀಶ್​ ಮಾಡುತ್ತಾ ಸರ್ಕಾರದ ವಿರುದ್ಧ ಆಕ್ರೋಶ

ಬಾಗಲಕೋಟೆ: ಬೂಟ್ ಪಾಲೀಶ್ ಚಳವಳಿಗೆ ಕನ್ನಡ ಕಿರುತೆರೆ ನಟಿ, ಕರವೇ ರಾಜ್ಯ ಮಹಿಳಾ ಉಪಾಧ್ಯಕ್ಷೆ ಅಶ್ವಿನಿ ಗೌಡ ಸಾಥ್​ ಕೊಟ್ಟಿದ್ದು, ಹೋರಾಟಕ್ಕೆ ಮತ್ತಷ್ಟು ಬಲ ಸಿಕ್ಕಿದೆ.

ಬಾಗಲಕೋಟೆಯಲಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಆಗ್ರಹಿಸಿ ಒಂದು ತಿಂಗಳಿಂದ ಬೂಟ್ ಪಾಲೀಶ್ ಚಳವಳಿ ನಡೆಯುತ್ತಿದೆ. 2014ರ ಬಜೆಟ್​ನಲ್ಲಿ ಬಾಗಲಕೋಟೆಗೆ ಮೆಡಿಕಲ್ ಕಾಲೇಜು ಘೋಷಣೆ ಆಗಿತ್ತು. ಆದರೆ ಈವರೆಗೂ ಅನುದಾನ ಸಿಗದೆ ಮೆಡಿಕಲ್ ಕಾಲೇಜು ಆರಂಭವಾಗಿಲ್ಲ. ಹಾಗಾಗಿ ಸರ್ಕಾರದ ಗಮನ ಸೆಳೆಯಲು ಕಳೆದ ತಿಂಗಳು ಬೂಟ್​ ಪಾಲೀಶ್​ ಚಳವಳಿ ಆರಂಭವಾಗಿದೆ. ಮೊದಲ ದಿನ ಕರವೇ ಜಿಲ್ಲಾಧ್ಯಕ್ಷ ರಮೇಶ್ ಬದ್ನೂರು ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಾಂಕೇತಿಕವಾಗಿ ಚಾಲನೆ ಸಿಕ್ಕಿತ್ತು.

ಕರವೇ ಕಾರ್ಯಕರ್ತರು ಬಾಗಲಕೋಟೆಯಲ್ಲಿ ತಿಂಗಳಿಂದ ಬೂಟ್ ಪಾಲೀಶ್ ಚಳವಳಿ ನಡೆಸುತ್ತಿದ್ದು, ಇಂದು(ಡಿ.11) ಅಶ್ವಿನಿ ಗೌಡ ಅವರು ಈ ಚಳವಳಿಗೆ ಧುಮುಕಿದ್ದಾರೆ. ಜಿಲ್ಲಾಧ್ಯಕ್ಷ ರಮೇಶ್ ಬದ್ನೂರು ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದಾರೆ. ಬಾಗಲಕೋಟೆಯ ರೈಲ್ವೆ ನಿಲ್ದಾಣದಿಂದ ಬಸವೇಶ್ವರ ಸರ್ಕಲ್​ವರೆಗೂ ನಡೆದ ಚಳವಳಿಯಲ್ಲಿ ದಾರಿಯುದ್ದಕ್ಕೂ ಸಿಗುವ ಅಂಗಡಿ ಮಾಲೀಕರ, ಪಾದಚಾರಿಗಳ ಬೂಟ್ ಪಾಲೀಶ್ ಅಶ್ವಿನಿ ಗೌಡ ಮತ್ತು ನೂರಾರು ಮಹಿಳಾ ಕಾರ್ಯಕರ್ತೆಯರು ಹಣ ಸಂಗ್ರಹಿಸಿದರು.