ಜಿಲ್ಲೆ

ಗ್ರಾಹಕರ ಫೋಟೋ ಎಡಿಟ್​ ಮಾಡಿ ಬ್ಲ್ಯಾಕ್​ಮೇಲ್​: ಧಾರವಾಡದಲ್ಲಿ ಐವರು ಲೋನ್​ ಆ್ಯಪ್​ ಏಜೆಂಟರ ಬಂಧನ

ಧಾರವಾಡ: ಇವರೆಲ್ಲ ಮುಂಬೈ ನಿವಾಸಿಗಳು ಎಂದು ಪೊಲೀಸ್​ ಮೂಲಗಳು ತಿಳಿಸಿದ್ದಾರೆ. ಸಾಲ ಪಡೆದ ಗ್ರಾಹಕರ ಫೋಟೊಗಳನ್ನು ಎಡಿಟ್​ ಮಾಡಿ ಅಶ್ಲೀಲ ಚಿತ್ರಗಳಿಗೆ ಜೋಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಮಾಡುವ ಬೆದರಿಕೆಯೊಡ್ಡುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರೆಲ್ಲರೂ ಲೋನ್​ ಆ್ಯಪ್​ ಏಜೆಂಟರ್​ಗಳು. ಧಾರವಾಡದಲ್ಲಿ ಮಹಾರಾಷ್ಟ್ರದ ಸೈಬರ್​ ಕ್ರೈಂ ಪೊಲೀಸರು ಇವರನ್ನು ಬಂಧಿಸಿದ್ದಾರೆ.

ಸೊಹೈಲ್​ ನಸೀರುದ್ದೀನ್​ ಸಯ್ಯದ್​(24), ಅಹ್ಮದ್​ ರರ ಜಾಹಿದ್​ ಹುಸೇನ್​(26), ಸಯ್ಯದ್​ ಅಖ್ತರ್​ (24), ಕೈಫ್​​ ಕಾದರಿ (22), ಮುಫ್ತಿಯಾಜ್​ ಬಾಷಾ ಪೀರಜಾದೆ(21) ಬಂಧಿತ ಆರೋಪಿಗಳು. ಈ ಪೈಕಿ ಓರ್ವ ಎಂಬಿಎ ಪದವೀಧರ, ಉಳಿದವರು ಸಹ ಸುಶಿಕ್ಷಿತರೇ ಆಗಿದ್ದಾರೆ ಎನ್ನಲಾಗಿದೆ. ಇವರೆಲ್ಲ ಮುಂಬೈ ನಿವಾಸಿಗಳು.

ಮುಂಬೈನ ಭಾಂಡುಪ್​ ಉಪನಗರ ಪೊಲೀಸ್​ ಠಾಣೆ ವ್ಯಾಪ್ತಿಯ ವ್ಯಕ್ತಿಯೊಬ್ಬ ಲೋನ್​ ಆ್ಯಪ್​ ಮೂಲಕ 11,000 ರೂ. ಸಾಲ ಪಡೆದಿದ್ದ. ಈತನ ಫೋಟೋ ಎಡಿಟ್​ ಮಾಡಿ ಕಿರುಕುಳ ಕೊಡುತ್ತಿದ್ದ ತಂಡ, 96,000 ರೂ. ವಸೂಲಿ ಮಾಡಿತ್ತು. ಮತ್ತೆ ಹಣಕ್ಕಾಗಿ ಬ್ಯ್ಲಾಕ್​ ಮೇಲ್​ ಮಾಡುತ್ತಿದ್ದರು. ನೊಂದ ವ್ಯಕ್ತಿ, ಪೊಲೀಸ್​ ಠಾಣೆ ಮೆಟ್ಟಿಲೇರಿದ್ದ.

ಮುಂಬೈ ಪೊಲೀಸರು ಬಂಧಿಸಿರುವ ಐವರ ಪೈಕಿ ಓರ್ವನು ರಾಜ್ಯದ ಮೊಬೈಲ್​ ಸಂಖ್ಯೆ ಬಳಸಿ ಲೋನ್​ ಪಡೆದ ಗ್ರಾಹಕನಿಗೆ ವಾಟ್ಸ್​ಆ್ಯಪ್​ ಮೂಲಕ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆರೋಪಿಗಳನ್ನು 5 ದಿನ ಪೊಲೀಸ್​ ಕಸ್ಟಡಿಗೆ ಪಡೆಯಲಾಗಿದೆ. ಮಹಾರಾಷ್ಟ್ರದ ಸೈಬರ್​ ಕ್ರೈಂ ಪೊಲೀಸ್​ ಠಾಣೆಗಳಲ್ಲಿ ಕಳೆದ 2 ವರ್ಷಗಳಲ್ಲಿ ಇಂಥ 2,084 ಪ್ರಕರಣಗಳು ದಾಖಲಾಗಿವೆ.