ಬಾಗಲಕೋಟೆ: ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಕೊನೇ ಚಿತ್ರ ಜೇಮ್ಸ್ ವಿಶ್ವಾದ್ಯಂತ ಇಂದು ತೆರೆಕಂಡಿದ್ದು, ಸಿನಿಮಾ ಕಣ್ತುಂಬಿಕೊಳ್ಳಲು ಕೋಟ್ಯಂತರ ಅಭಿಮಾನಿಗಳು ಥಿಯೇಟರ್ಗಳ ಬಳಿ ಸಾಲುಗಟ್ಟಿ ನಿಂತಿದ್ದಾರೆ. ದೇವರೇ ಜೇಮ್ಸ್ ಟಿಕೆಟ್ ಸಿಕ್ಕರೆ ಸಾಕಪ್ಪ ಎಂದು ಮನದಲ್ಲೇ ಪ್ರಾರ್ಥಿಸುತ್ತಿದ್ದಾರೆ. ಚಿತ್ರಮಂದಿರಗಳು ಎಲ್ಲೆಡೆ ಹೌಸ್ಫುಲ್ ಬೋರ್ಡ್ ಹಾಕಿದ್ದರೂ ಅಭಿಮಾನಿಗಳು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ, ಬಾಗಲಕೋಟೆಯಲ್ಲಿ ಟಿಕೆಟ್ ಸಿಕ್ಕಿ ಥಿಯೇಟರ್ ಒಳಗೆ ಹೋದ ಆರೇಳು ಮಂದು, ಚಿತ್ರ ನೋಡಲಾಗದೆ ಕಣ್ಣೀರು ಹಾಕುತ್ತಾ ಆರಂಭದಲ್ಲೇ ಹೊರ ಬಂದಿದ್ದಾರೆ. ಜೇಮ್ಸ್ ಚಿತ್ರ ಪ್ರದರ್ಶನ ಆರಂಭವಾಗುತ್ತಿದ್ದಂತೆ ಪರದೆ ಮೇಲೆ ಅಪ್ಪು ಅವರನ್ನ ನೋಡಿ ಭಾವುಕರಾದ ಅಭಿಮಾನಿಗಳು ಬಿಕ್ಕಿಬಿಕ್ಕಿ ಅಳುತ್ತಾ ಹೊರ ಬಂದುಬಿಟ್ಟರು.
ಬೆಳಗ್ಗೆ 10 ಗಂಟೆಗೆ ಫಸ್ಟ್ ಶೋ ನೋಡಲು ಹೋಗಿದ್ದ ಭೀಮು, ಮಂಜು ಸೇರಿ ಆರೇಳು ಮಂದಿ ಅಪ್ಪು ನೆನೆದು ಕಣ್ಣೀರಿಟ್ಟರು. ಇದು ಅಪ್ಪು ಅವರ ಕೊನೇ ಚಿತ್ರ ಅನ್ನೋದನ್ನೇ ಸಹಿಸಲು ಆಗ್ತಿಲ್ಲ. ಅವರ ಆ್ಯಕ್ಟಿಂಗ್ ಅದ್ಭುತವಾಗಿದೆ. ಶಿವಣ್ಣ ಅವರ ಹಿನ್ನಲೆ ಧ್ವನಿಯೂ ಸೂಪರ್. ಆದ್ರೆ, ನಮ್ಮ ಬಾಸ್ ಇಲ್ವಲ್ಲಾ ಅನ್ನೋದನ್ನು ಸಹಿಸಿಕೊಳ್ಳಲು ಆಗ್ತಿಲ್ಲ. ಟಾಕೀಸ್ನಲ್ಲಿ ಕೂರಲು ಸಹ ಆಗ್ತಿಲ್ಲ. ಅಪ್ಪು ಹೆಸರಿಗೆ ನಾವು ಧಕ್ಕೆ ತರಲ್ಲ, ಅವರ ಹೆಸರಲ್ಲಿ ಸಮಾಜಮುಖಿ ಕೆಲಸ ಮಾಡ್ತೀವಿ ಎನ್ನುತ್ತಾ ಮನೆಯತ್ತ ಹೊರಟರು.
ಇವರೆಲ್ಲರೂ ಜೇಮ್ಸ್ ಚಿತ್ರ ಬಿಡುಗಡೆ ಹಿನ್ನೆಲೆ ವಾರದಿಂದ ಸಿದ್ಧತೆ ಮಾಡಿದ್ದರು. ಇಂದು ಬೆಳಗ್ಗೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ರಕ್ತದಾನವನ್ನೂ ಮಾಡಿದ್ದರು. ಆದರೆ, ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ರಾಜಕುಮಾರನಾಗಿ ಮೆರೆದ ಅಪ್ಪು ಇನ್ನಿಲ್ಲ, ಇದೇ ಅವರ ಕೊನೇ ಸಿನಿಮಾ ಎಂಬುದನ್ನ ಸಹಿಸಲು ಮಾತ್ರ ಅಭಿಮಾನಿಗಳಿಗೆ ಆಗ್ತಿಲ್ಲ.