ಜಿಲ್ಲೆ

ಬಿಬಿಎಂಪಿ ನೌಕರರ ಸಹಕಾರ ಸಂಘದ ಅಧ್ಯಕ್ಷರಾಗಿ ಎ.ಅಮೃತ್‌ರಾಜ್ ಮರು ಆಯ್ಕೆ

ಬೆಂಗಳೂರು: ಬಿಬಿಎಂಪಿ ನೌಕರರ ಸಹಕಾರ ಸಂಘದ ಅಧ್ಯಕ್ಷರಾಗಿ ಎ.ಅಮೃತ್‌ರಾಜ್, ಉಪಾಧ್ಯಕ್ಷರಾಗಿ ಕೆ.ಜಿ. ರವಿ ಅವಿರೋಧವಾಗಿ ಆಯ್ಕೆಯಾದರು. ಇವರ ಅಧಿಕಾರವಧಿ ಮುಂದಿನ 5 ವರ್ಷವರೆಗೆ ಇರಲಿದೆ.

ಆಡಳಿತ ಮಂಡಳಿ ನಿರ್ದೇಶಕರಾಗಿ ಗಂಗಾಧರ್ ಲಾಲಿ, ಕೆ.ಎನ್.ವಿನಯ್ ಕುಮಾರ್ ಎಂ. ಮಹೇಶ್, ಎನ್.ಹರೀಶ್ ಕುಮಾರ್,ಎಲ್.ಆರ್.ಮಂಜುನಾಥ್, ಮುನಿರಾಜು, ಜಿ.ಮಂಜುನಾಥ್, ಡಿ. ರಾಜಶೇಖರ್, ಆರ್. ಪಿ. ವಾಣಿ, ಅಕ್ಕಮಹಾದೇವಿ, ಎಸ್.ಜಿ.ಮಹಾದೇವಿ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ಎ.ಅಮೃತ್‌ರಾಜ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕೆ.ಜಿ.ರವಿ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸಲಿಲ್ಲ. ಚುನಾವಣಾಧಿಕಾರಿ ಮಾನಸ ಕೃಷ್ಣಪ್ಪ, ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು. ಭಾನುವಾರ ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ಡಾ.ರಾಜ್ ಕುಮಾರ್ ಗಾಜಿನಮನೆ ಸಭಾಂಗಣದಲ್ಲಿ ಸಂಘದ ನಿರ್ದೇಶಕ ಸ್ಥಾನದ ಚುನಾವಣೆ ನಡೆದಿತ್ತು. ಇದರಲ್ಲಿ ಎಅಮೃತ್‌ರಾಜ್, ಕೆ.ಜಿ.ರವಿ ತಂಡವು ಭರ್ಜರಿ ಗೆಲುವು ಸಾಧಿಸಿತ್ತು.

ಅಮೃತ್‌ರಾಜ್ ಮಾತನಾಡಿ,ಸಂಘದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲು ಗುರಿ ಹೊಂದಿದ್ದೇನೆ. ಸದಸ್ಯರ ಮಕ್ಕಳ ಉನ್ನತ ಶಿಕ್ಷಣಕ್ಕೆ ಸುಲಭವಾಗಿ ಸಾಲ ಸೌಲಭ್ಯ ಮತ್ತು ಪ್ರತಿಭಾವಂತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಜ.3ರಂದು 100 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ.ಅಧಿಕಾರಿ ಮತ್ತು ನೌಕರರಿಗೆ ಸಂಕಷ್ಟ ಸಮಯದಲ್ಲಿ ಹಣ ಅವಶ್ಯಕತೆ ಇರುತ್ತದೆ. ಅಂಥ ಸಂದರ್ಭದಲ್ಲಿ ಸಂಘದಲ್ಲಿ ತಕ್ಷಣ ಸಾಲ ಕಡಿಮೆ ಬಡ್ಡಿದರದಲ್ಲಿ ಸಾಲ ದೊರೆಯಲಿದೆ ಎಂದರು.

ಸದಸ್ಯತ್ವ ಸಂಖ್ಯೆ ಹೆಚ್ಚಳ: ಸಂಘವನ್ನು ಅಭಿವೃದ್ಧಿ ಮಾಡುವುದು ನಮ್ಮ ಉದ್ದೇಶ. 3,600ಕ್ಕೂ ಅಧಿಕ ಸದಸ್ಯರಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿ ಮತ್ತು ನೌಕರರಿಗೆ ಸದಸ್ಯತ್ವ ನೀಡಲು ಕ್ರಮ ಕೈಗೊಳ್ಳಲಾಗುವುದು. ನೌಕರರು ನಿವೃತ್ತಿ ನಂತರ ಬಂದ ಹಣವನ್ನು ಸಂಘದಲ್ಲಿ ಠೇವಣಿ ಇಟ್ಟರೆ ಆಕರ್ಷಕ ಬಡ್ಡಿ ನೀಡಲಾಗುವುದು. ಪಾರದರ್ಶಕ ಆಡಳಿತ ಮತ್ತು ದುಂದುವೆಚ್ಚಗಳಿಗೆ ಕಡಿವಾಣ ಹಾಕಿದ ಪರಿಣಾಮ ಸಂಘ ಲಾಭದತ್ತ ಸಾಗುತ್ತಿದೆ. ಸಮುದಾಯ ಭವನ ನಿರ್ಮಿಸುವಂತೆ ಸರ್ಕಾರಕ್ಕೆ ಮತ್ತು ಬಿಬಿಎಂಪಿ ಆಯುಕ್ತರಿಗೆ ಮನವಿ ಸಲ್ಲಿಸಲಾಗುವುದು ಎಂದು .ಅಮೃತ್‌ರಾಜ್ ಹೇಳಿದರು.