ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿನ 9 ಕಡೆ ಬಿಡಿಎ ಮಧ್ಯವರ್ತಿಗಳ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಬಿಡಿಎ) ಅಧಿಕಾರಿಗಳಿಗೆ ಲಂಚದ ಆಮಿಷವೊಡ್ಡಿ ಮತ್ತು ಪ್ರಭಾವ ಬೀರಿ ಸರ್ಕಾರಿ ಕೆಲಸದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಆರೋಪದ ಮೇಲೆ 9 ಮಧ್ಯವರ್ತಿಗಳ ಮೇಲೆ ಮಂಗಳವಾರ ಬೆಳಗ್ಗೆ ಎಸಿಬಿ ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಏಕಕಾಲಕ್ಕೆ ದಾಳಿ ಮಾಡಲಾಗಿದೆ.
ಬಿಡಿಎ ಕಚೇರಿಗಳಲ್ಲಿ ಏಜೆಂಟರಂತೆ ಕೆಲಸ ಮಾಡುತ್ತಿರುವ ಚಾಮರಾಜಪೇಟೆಯ ರಘು ಬಿ.ಎನ್., ಆರ್.ಟಿ.ನಗರದ ಮನೋರಾಯನಪಾಳ್ಯದ ಮೋಹನ್, ದೊಮ್ಮಲೂರಿನ ಮನೋಜ್, ಮಲ್ತಳ್ಳಿಯ ಕೆನಗುಂಟೆ ಮುನಿರತ್ನ(ರತ್ನವೇಲು), ಆರ್.ಆರ್.ನಗರದ ತೇಜಸ್ವಿ, ಮುದ್ದಿನಪಾಳ್ಯದ ಕೆ.ಜಿ. ಸರ್ಕಲ್ನ ಅಶ್ವತ್, ಬಿಡಿಎ ಬಡಾವಣೆಯ ಚಾಮುಂಡೇಶ್ವರಿನಗರದ ರಾಮ, ಲಕ್ಷ್ಮಣ, ಮುದ್ದಿನಪಾಳ್ಯದ ಚಿಕ್ಕಹನುಮ್ಮಯ್ಯ ಅವರ ಮನೆಗಳ ಮೇಲೆ ಎಸಿಬಿ ದಾಳಿಯಾಗಿದೆ. ಅಧಿಕಾರಿಗಳು ಮತಹತ್ವದ ದಾಖಲೆಗಳಿಗಾಗಿ ಶೋಧ ಮುಂದುವರಿಸಿದ್ದಾರೆ.