ಜಿಲ್ಲೆ

ಬೆಂಗಳೂರಿನ ಬಗ್ಗೆ ಕಾಳಜಿಯಿದ್ದರೆ ಪಾರದರ್ಶಕತೆ ಕಾಯ್ದುಕೊಳ್ಳಿ: ಸರ್ಕಾರ ಮತ್ತು ಬಿಬಿಎಂಪಿಗೆ ಎಎಪಿ ಸವಾಲು

arunakunigal

ಬೆಂಗಳೂರು: ನಗರದ ರಸ್ತೆಗಳ ಅಭಿವೃದ್ಧಿಗಾಗಿ ಕಳೆದ 5 ವರ್ಷದಲ್ಲಿ ಸರ್ಕಾರ ಬಿಡುಗಡೆ ಮಾಡಿದ 20,000 ಕೋಟಿ ರೂಪಾಯಿ ಸದ್ಬಳಕೆ ಆಗಿಲ್ಲ. ಈ ಹಣ ಜನಪ್ರತಿನಿಧಿಗಳ ಜೇಬು ಸೇರಿದ್ದು, ವಾಹನ ಸವಾರರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಗುತ್ತಿಗೆ ಕಾಮಗಾರಿಗಳಲ್ಲಿ ಶೇ.40 ಅನುದಾನ ಲೂಟಿ ಆಗಿದೆ. ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಮತ್ತೆ ಒಂದೂವರೆ ಸಾವಿರ ಕೋಟಿ ರೂ., ಅಮೃತ್ ನಗರೋತ್ಥಾನ ಯೋಜನೆಗೆ 6000 ಕೋಟಿ ರೂ. ಬಿಡುಗಡೆಗೆ ಮುಂದಾಗಿರುವು ಲೂಟಿಕೋರರಿಗೆ ಮತ್ತಷ್ಟು ಅನುಕೂಲ ಮಾಡುವ ಉದ್ದೇಶ ಅಡಗಿದೆ ಎಂದು ಆಮ್‌ ಆದ್ಮಿ ಪಾರ್ಟಿ ಆಕ್ರೋಶ ವ್ಯಕ್ತಪಡಿಸಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ನಗರದ ಎಎಪಿ ಅಧ್ಯಕ್ಷ ಮೋಹನ್‌ ದಾಸರಿ, ಗುತ್ತಿಗೆ ಕಾಮಗಾರಿಗಳಲ್ಲಿ ಶೇ.40 ಅಕ್ರಮ ಆಗಿರುವುದರ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಲು ಸಿಎಂ ಬಸವರಾಜ ಬೊಮ್ಮಾಯಿ ಹೆದರುತ್ತಿದ್ದಾರೆ. ಮುಂದಿನ ಕಾಮಗಾರಿಗಳನ್ನು ನ್ಯಾಯಾಧೀಶರ ವಿವೇಚನೆಯಡಿ ಸಮಿತಿ ರಚಿಸಿ ನಡೆಸುವುದಾಗಿ ಸಿಎಂ ಹೇಳಿದ್ದರು. ಆದರೆ ಈ ಸಮಿತಿಯನ್ನು ರಚಿಸದೆ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದಾರೆ. ಕೆಆರ್‌ಐಡಿಎಲ್‌ಗೆ ಕಾಮಗಾರಿಗಳನ್ನು ವಹಿಸುವ ಉದ್ದೇಶವೇ ಅಕ್ರಮ ಎಸಗುವುದಾಗಿದೆ. ಅನಗತ್ಯವಾಗಿ 4ಜಿ ವಿನಾಯಿತಿ ಬಳಸಿಕೊಂಡು ಪಾರದರ್ಶಕ ಗುತ್ತಿಗೆಯಿಂದ ತಪ್ಪಿಸಿಕೊಳ್ಳಲು ಹೊರಟಿರುವ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.

ಈಗ ವಿವಿಧ ಕಾಮಗಾರಿ ನೆಪದಲ್ಲಿ 1,500 ಕೋಟಿ ರೂಪಾಯಿ ಹಾಗೂ ಅಮೃತ್ ನಗರೋತ್ಥಾನ ಯೋಜನೆಗೆ 6000 ಕೋಟಿ ಹಣ ಬಿಡುಗಡೆ ಮಾಡಲು ಮುಂದಾಗಿರುವುದು ಕೂಡ ಲೂಟಿ ಮಾಡುವ ಪ್ರಯತ್ನ. ಮುಂಬರುವ ಬಿಬಿಎಂಪಿ ಚುನಾವಣೆಯ ಖರ್ಚಿಗಾಗಿ ಸರ್ಕಾರದ ಹಣವನ್ನು ಈ ಮೂಲಕ ಲೂಟಿ ಮಾಡಲಾಗುತ್ತಿದೆ. ಬೆಂಗಳೂರಿನ ಬಗ್ಗೆ ಸರ್ಕಾರ ಹಾಗೂ ಬಿಬಿಎಂಪಿಗೆ ನಿಜಕ್ಕೂ ಕಾಳಜಿಯಿದ್ದರೆ ಪಾರದರ್ಶಕವಾಗಿ ಕಾಮಗಾರಿಗಳನ್ನು ಜಾರಿಗೆ ತರಲಿ ಎಂದು ಮೋಹನ್‌ ದಾಸರಿ ಸವಾಲು ಹಾಕಿದರು.

ಎಎಪಿ ಬೆಂಗಳೂರು ಉಪಾಧ್ಯಕ್ಷ ಬಿ.ಟಿ.ನಾಗಣ್ಣ ಮಾತನಾಡಿ, ಸರ್ಕಾರದ ಭ್ರಷ್ಟ ನಡೆಯನ್ನು ನೋಡಿಕೊಂಡು ಆಮ್‌ ಆದ್ಮಿ ಪಾರ್ಟಿ ಸುಮ್ಮನಿರುವ ಪ್ರಶ್ನೆಯೇ ಇಲ್ಲ. ಕಾಮಗಾರಿಗಳ ಪ್ರಗತಿ ಹಾಗೂ ಅನುದಾನ ಬಳಕೆಯ ಮಾಹಿತಿಯನ್ನು ಪ್ರತಿದಿನ ವೆಬ್‌ಸೈಟ್‌ಗೆ ಅಪ್‌ಡೇಟ್‌ ಮಾಡಿ ಸಾರ್ವಜನಿಕರಿಗೆ ತಿಳಿಯುವಂತೆ ಮಾಡಬೇಕು. ಕಾಮಗಾರಿ ಮುಗಿದ ನಂತರ ಸೋಶಿಯಲ್‌ ಆಡಿಟ್‌ ಮಾಡಿ ಭ್ರಷ್ಟಾಚಾರವನ್ನು ಜನರ ಮುಂದೆ ತೆರೆದಿಡಲು ನಿರ್ಧರಿಸಿದ್ದೇವೆ. ಆಡಳಿತದಲ್ಲಿ ಪಾರದರ್ಶಕತೆ ತರಲೆಂದೇ ಹುಟ್ಟಿಕೊಂಡಿರುವ ಪಕ್ಷ ನಮ್ಮದಾಗಿದ್ದು, ಜನರ ಒಂದೊಂದು ರೂಪಾಯಿ ತೆರಿಗೆಯೂ ವ್ಯರ್ಥವಾಗದಂತೆ ಮಾಡಲು ಪ್ರಯತ್ನಿಸುತ್ತೇವೆ. ಹಗಲು ದರೋಡೆ ಮಾಡಲು ಸರ್ಕಾರ ಮಾಡುವ ಪ್ರತಿಯೊಂದು ಕುತಂತ್ರವನ್ನೂ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವ ವಿಶ್ವಾಸವಿದೆ ಎಂದು ಹೇಳಿದರು.

ಎಎಪಿ ಬೆಂಗಳೂರು ಮಾಧ್ಯಮ ಸಂಯೋಜಕ ವಿಜಯ್‌ ಶಾಸ್ತ್ರಿಮಠ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.