ಜಿಲ್ಲೆ

ಮುಳುಗುತ್ತಿದ್ದ ಬಾಲಕನನ್ನು ರಕ್ಷಿಸಿದ 7 ನೇ ಕ್ಲಾಸ್‌ ಹುಡುಗ

Uttara Kannada - Subash Hegde

ಭಟ್ಕಳ: ತನ್ನ ಅಜ್ಜಿ ಮನೆಗೆ ಬೇಸಿಗೆ ರಜೆ ಕಳೆಯಲು ಬಂದ ಸಮುದ್ರ ಪಾಲಾಗುತ್ತಿದ್ದ ಬಾಲಕನೋರ್ವನ ಪ್ರಾಣವನ್ನು ಇನ್ನೊಬ್ಬ ಬಾಲಕ ರಕ್ಷಿಸಿದ ಘಟನೆ ನಡೆದಿದೆ. ಭಟ್ಕಳ ತಾಲೂಕಿನ ಮಾವಿನಕುರ್ವೆ ಗ್ರಾ. ಪಂ. ವ್ಯಾಪ್ತಿಯ ತಲಗೋಡಿನ ಸಮುದ್ರ ತೀರದಲ್ಲಿ ಈ ಘಟನೆ ನಡೆದಿದೆ. 10ನೇ ತರಗತಿ ಓದುತ್ತಿದ್ದ ಬಾಲಕ ಸಮುದ್ರ ಪಾಲಾಗುತ್ತಿದ್ದ ವೇಳೆ 7ನೇ ತರಗತಿಯ ಬಾಲಕನೋರ್ವ ರಕ್ಷಣೆ ಮಾಡಿದ ಘಟನೆಯಿದು.ಕುಂದಾಪುರ ತಾಲೂಕಿನ ಗಂಗೊಳ್ಳಿ ಮೂಲದ ಬಾಲಕ ಧ್ರುವ ಲಕ್ಷ್ಮಣ ಖಾರ್ವಿ ಅಪಾಯಕ್ಕೆ ಸಿಲುಕಿದ ಬಾಲಕ.

ತನ್ನ ಬೇಸಿಗೆ ರಜೆಯನ್ನು ಕಳೆಯಲು ಮಾವಿನಕುರ್ವೆ ವ್ಯಾಪ್ತಿಯ ತಲಗೋಡಿನಲ್ಲಿರುವ ತನ್ನ ಅಜ್ಜಿ ಮನೆಗೆ ಬಂದಿದ್ದ. ಈ ವೇಳೆ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆಟವಾಡಲು ಸಮುದ್ರ ತೀರಕ್ಕೆ ತೆರಳಿದ್ದಾನೆ. ನಂತರ ಸಮುದ್ರಕ್ಕೆ ಇಳಿದು ಈಜಲು ಹೋದ ವೇಳೆ ಅಲೆಯ ರಭಸಕ್ಕೆ ಯುವಕ ಕೊಚ್ಚಿ ಹೋಗುತ್ತಿರುವಾಗ ತನ್ನ ಪ್ರಾಣ ರಕ್ಷಣೆಗಾಗಿ ಕೂಗಿಕೊಂಡಿದ್ದಾನೆ. ಇದೇ ವೇಳೆ ಅಲ್ಲೇ ಸಮುದ್ರ ತೀರಕ್ಕೆ ಆಟ ಆಡಲು ಬಂದ ಅದೇ ಊರಿನ ಬಾಲಕ ಶ್ರೀಕರ ನೋಡಿದ್ದಾನೆ. ಕರಿಕಲ್ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯ ಶ್ರೀಕರ ತನ್ನ ಇನೊಬ್ಬ ಗೆಳೆಯನೊಂದಿಗೆ ಅಪಾಯಕ್ಕೆ ಸಿಲುಕಿದ್ದ ಧ್ರುವನ ಪ್ರಾಣ ರಕ್ಷಣೆ ಮಾಡಿದ್ದಾನೆ.ಬಾಲಕ ಈ ಸಾಧನೆಗೆ ತಾಲೂಕಿನ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ತನ್ನ ಮಗನ ಪ್ರಾಣ ಉಳಿಸಿದ್ದಕ್ಕಾಗಿ ಧ್ರುವನ ತಂದೆ ತಾಯಿ ಶ್ರೀಕರನಿಗೆ ಧನ್ಯವಾದ ಸಲ್ಲಿಸಿದ್ದಾರೆ.