ಜಿಲ್ಲೆ

ಮೊಬೈಲ್​ನಲ್ಲೇ ವ್ಯವಹಾರ ಕುದುರಿಸಿ 3 ದಿನದ ಗಂಡು ಮಗುವನ್ನೇ ಮಾರಿದ ಮಹಿಳೆ!

arunakunigal

ಮೈಸೂರು: ಇಲ್ಲೊಬ್ಬ ಮಹಿಳೆ ಮೊಬೈಲ್​ನಲ್ಲೇ ವ್ಯವಹರಿಸಿ ತನ್ನ ಮೂರು ದಿನದ ಹಸುಗೂಸನ್ನೇ ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಬೆಂಗಳೂರಿನ ರೋಜಾ ಎಂಬಾಕೆಗೆ 7 ತಿಂಗಳ ಹಿಂದೆ ಗಂಡು ಮಗು ಆಗಿತ್ತು. ಆದರೆ ಆಕೆ ನನಗೆ ಹೆಣ್ಣು ಮಗು ಬೇಕಿತ್ತು, ಗಂಡು ಮಗು ಬೇಡ ಎಂದು ಎಚ್‌.ಡಿ.ಕೋಟೆ ತಾಲೂಕಿನ ಟೈಗರ್ ಬ್ಲಾಕ್​ನ ಹಕ್ಕಿಪಿಕ್ಕಿ ಜನಾಂಗದ ದಂಪತಿಗೆ ಮಾರಾಟ ಮಾಡಿದ್ದಳು. ಇದನ್ನೂ ಓದಿರಿ ಯಾರಿಗೂ ತಿಳಿಯದಂತೆ ಪ್ರೇಯಸಿಯನ್ನ ಮನೆಯಲ್ಲೇ 10 ವರ್ಷ ಅಡಗಿಸಿಟ್ಟಿದ್ದ ಪ್ರಿಯಕರ! ಆ ಕೋಣೆಯ ರಹಸ್ಯ ಬಯಲಾಗಿದ್ದೇ ರೋಚಕ

ಅಂಬರೀಶ್ ಮತ್ತು ಮಧುಮಾಲತಿ ದಂಪತಿಯು ರೋಜಾಗೆ 1.5 ಲಕ್ಷ ರೂ. ಕೊಟ್ಟು ಮಗುವನ್ನ ಖರೀದಿಸಿದ್ದರು. ಈ ದಂಪತಿ ತಲೆಕೂದಲು ಬೆಳೆಯುವ ತೈಲ ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ತೈಲ ಮಾರಾಟದ ವೇಳೆ ರೋಜಾಳ ಪರಿಚಯವಾಗಿತ್ತು. ಹಾಗಾಗಿ ಇವರ ಬಳಿ ರೋಜಾ ಮೊಬೈಲ್ ಕರೆ ಮೂಲಕವೇ ಚೌಕಾಸಿ ನಡೆಸಿ ಅಂತಿಮವಾಗಿ 1.5 ಲಕ್ಷ ರೂ.ಗೆ ಮಗು ಮಾರಿದ್ದಳು. ಅಂದಿನಿಂದ ಆ ಮಗು ಟೈಗರ್ ಬ್ಲಾಕ್​ನಲ್ಲಿ ಅಂಬರೀಷ್​ ಮತ್ತು ಮಧುಮಾಲಾತಿ ಆಶ್ರಯದಲ್ಲೇ ಬೆಳೆಯುತ್ತಿದೆ.

ಇದೀಗ ಅಂದರೆ 7 ತಿಂಗಳ ಬಳಿಕ ಬೆಂಗಳೂರಿಂದ ಟೈಗರ್​ ಬ್ಲಾಕ್​ಗೆ ಬಂದ ರೋಜಾ, ಮಗು ಕೊಡುವಂತೆ ರಂಪಾಟ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಈ ಮಗು ಅಪಹರಣವಾಗಿತ್ತೇ? ಎಂಬ ಅನುಮಾನವೂ ಕಾಡುತ್ತಿದೆ. ಎಚ್.ಡಿ.ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ. (ದಿಗ್ವಿಜಯ ನ್ಯೂಸ್​)