ಜಿಲ್ಲೆ

ಕಿಮ್ಸ್​ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ 2 ವರ್ಷದ ಕಂದಮ್ಮ ಬಲಿ? ಮುಗಿಲುಮುಟ್ಟಿದೆ ಪಾಲಕರ ಆಕ್ರಂದನ

ಹುಬ್ಬಳ್ಳಿ: ವೈದ್ಯರ ನಿರ್ಲಕ್ಷ್ಯಕ್ಕೆ ಎರಡು ವರ್ಷದ ಮಗು ಬಲಿಯಾಗಿದೆ ಎಂದು ಆರೋಪಿಸಿ ಮಗುವಿನ ಪಾಲಕರು, ಕುಟುಂಬಸ್ಥರು ಕಿಮ್ಸ್​ನಲ್ಲಿ ಪ್ರತಿಭಟನೆ ನಡೆಸಿದರು.

ತಾಜ್ ನಗರದ 2 ವರ್ಷದ ರಕ್ಷಾ ಚೌಧರಿ ಮೃತ ದುರ್ದೈವಿ. ಮಗುವಿನ ಬಾಯಿಯೊಳಗೆ ಸಣ್ಣ ಗಡ್ಡೆಯಾಗಿತ್ತು. ಚಿಕಿತ್ಸೆಗೆಂದು ಪಾಲಕರು ಮಗುವನ್ನು ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದರು. ಪಾಲಕರ ಅನುಮತಿ ಪಡೆಯದೇ ವೈದ್ಯರು ಆಪರೇಷನ್ ಮಾಡಿದ್ದಾರೆ. ಅಪರೇಷನ್ ಬಳಿಕ ತೀವ್ರ ರಕ್ತಸ್ರಾವವಾಗಿತ್ತು. ರಕ್ತಸ್ರಾವ ನಿಲ್ಲದ ಹಿನ್ನೆಲೆ‌, ಖಾಗಗಿ ಆಸ್ಪತ್ರೆಗೆ ಕಳುಹಿಸಿದ್ದರು. ಅಲ್ಲಿಯೂ ರಕ್ತಸ್ರಾವ ನಿಲ್ಲದ ಹಿನ್ನೆಲೆ‌ ವಾಪಸ್ ಕಿಮ್ಸ್​ಗೆ ಕಳುಹಿಸಿದ್ದರು. ಕಿಮ್ಸ್​ಗೆ ವಾಪಸ್ ಬಂದ ಮೇಲೆ ಮಗು ಸಾವನ್ನಪ್ಪಿದೆ ಎಂದು ಪಾಲಕರು ಆರೋಪಿಸುತ್ತಾ ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಅಡ್ಮಿಟ್ ಆಗುವಾಗ ಚೆನ್ನಾಗಿದ್ದ ಮಗು ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದೆ. ಮೃತಪಟ್ಟ ಬಳಿಕ ನಿನ್ನೆ ದಿನಾಂಕ ಹಾಕಿ‌ ಸಹಿ‌ ಪಡೆದಿದ್ದಾರೆ ಎಂದು ಪಾಲಕರು ಆಕ್ರೋಶ ಹೊರಹಾಕಿದ್ದಾರೆ. ವೈದ್ಯರ ನಿರ್ಲಕ್ಷ್ಯ ಆಗಿಲ್ಲ. ಸರಿಯಾದ ಚಿಕಿತ್ಸೆ ನೀಡಲಾಗಿದೆ‌ ಎಂದು ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ ಸ್ಪಷ್ಟಪಡಿಸಿದ್ದಾರೆ.