ಜಿಲ್ಲೆ

ಹಣ್ಣು ಕಳ್ಳರ ಮಧ್ಯೆ 80ಕ್ಕೂ ಹೆಚ್ಚು ಹಲಸಿನ ಮರ ಕದ್ದೊಯ್ದ ಕಿಡಿಗೇಡಿಗಳು! ಕಂಗಾಲಾದ ತೋಟದ ಮಾಲೀಕ

ಮೋಹನ್​ ಶೆಟ್ಟಿ

ವಿಜಯಪುರ: ಸಿಹಿ ಸಿಹಿಯಾದ, ರುಚಿಕರ ಹಣ್ಣನ್ನು ತಿನ್ನುವ ಆಸೆಯಿಂದ ಕೆಲವರು ಫಲ ನೀಡುವ ಮರಗಳನ್ನು ಬೆಳೆದಿರುವ ಮನೆಗಳಿಗೆ ನುಗ್ಗಿ ಹಣ್ಣು ಕಸಿದು ಪರಾರಿಯಾಗುತ್ತಾರೆ. ಇದರಿಂದ ಕುಪಿತಗೊಳ್ಳುವ ಮನೆ ಅಥವಾ ತೋಟದ ಮಾಲೀಕರು, ಕಳ್ಳತನ ಮಾಡುವವರ ವಿರುದ್ಧ ಕಿಡಿಕಾರುತ್ತಾರೆ. ಆದ್ರೆ, ವಿಜಯಪುರದ ದೇವನಹಳ್ಳಿ ತಾಲೂಕು ಇರಿಗೇನಹಳ್ಳಿಯಲ್ಲಿ ರೈತ ಟಿ.ಶಾಮಣ್ಣ ಅವರ ತೋಟದಲ್ಲಿ 80ಕ್ಕೂ ಹೆಚ್ಚು ಹಲಸಿನ ಮರಗಳನ್ನು ಅಪರಿಚಿತರು ಕಡಿದುಕೊಂಡು ಹೋಗಿರುವ ಘಟನೆ ಬೆಳಕಿಗೆ ಬಂದಿದ್ದು, ಪ್ರಕರಣ ವಿಜಯಪುರ ಠಾಣೆಯಲ್ಲಿ ದಾಖಲಾಗಿದೆ.

2011ರಲ್ಲಿ ಲಾಲ್ ಬಾಗ್​ನಿಂದ ಮಧುರ ಹಾಗೂ ಬೇಲಿಚಂದ್ರ ತಳಿಯ ಹಲಸಿನ ಸಸಿಗಳನ್ನು ಖರೀದಿಸಿಕೊಂಡು ಬಂದು ನಾಟಿ ಮಾಡಿದ್ದೆವು. ಈ ಪೈಕಿ ಕೆಲವು ಮರಗಳು ಎರಡು ವರ್ಷಗಳ ಹಿಂದೆ ಕೆರೆಗಳು ತುಂಬಿದ್ದ ಸಮಯದಲ್ಲಿ ಒಣಗಿದ್ದವು. ಉಳಿದ 80ಕ್ಕೂ ಹೆಚ್ಚು ಮರಗಳು ಉತ್ತಮವಾಗಿ ಫಸಲು ಬಿಡುತ್ತಿದ್ದವು. ಪ್ರತಿವರ್ಷ ಬೆಳೆ ಬಂದಾಗ 2-3 ಲಕ್ಷ ರೂಪಾಯಿಗೆ ಬೆಳೆ ಮಾರಾಟ ಮಾಡುತ್ತಿದ್ದೆ, ಈ ಬಾರಿ ಫಸಲು ಮಾರಾಟ ಮಾಡಿ, ಭೂತಾನ್ ಕಡೆಗೆ ಪ್ರವಾಸ ಹೋಗಿದ್ದಾಗ ಯಾರೋ ಮರಗಳನ್ನು ಕಟಾವು ಮಾಡಿಕೊಂಡು, ಕೊಂಬೆಗಳನ್ನೂ ಬಿಡದೆ ಕದ್ದೊಯ್ದಿದ್ದಾರೆ ಎಂದು ತೋಟದ ಮಾಲೀಕ ಟಿ.ಶಾಮಣ್ಣ ತಮ್ಮ ದುಃಖವನ್ನು ತೋಡಿಕೊಂಡಿದ್ದಾರೆ.

ಪ್ರವಾಸದಿಂದ ವಾಪಸ್ ಬಂದ ನಂತರ ತೋಟದ ಕಡೆಗೆ ಹೋದಾಗ ಮರಗಳಿಲ್ಲದೆ ಇರುವುದನ್ನು ಗಮನಿಸಿದಾಗ ಆಘಾತವಾಯಿತು. ಅಕ್ಕಪಕ್ಕದಲ್ಲಿ ವಿಚಾರಿಸಿದಾಗ ಯಾರೋ ಟ್ರ್ಯಾಕ್ಟರ್​ಗಳನ್ನು ತಂದು, ಹಲಸಿನ ಮರಗಳನ್ನು ಕಟಾವು ಮಾಡಿಕೊಂಡು, ತುಂಬಿಸಿಕೊಂಡು ಸ್ಥಳದಿಂದ ಪರಾರಿಯಾಗಿರುವುದು ತಿಳಿದುಬಂದಿದೆ ಎಂದು ಹೇಳಿದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಇಲ್ಲಿನ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದಿದ್ದಾರೆ.