| ಶಿವಾನಂದ ತಗಡೂರು ಬೆಂಗಳೂರು
ವಿಧಾನಸಭೆಯ ಮೊದಲ ಅಧಿವೇಶನಕ್ಕೆ ಇಂದು (ಜೂ. 18) ಎಪ್ಪತ್ತು ವಸಂತಗಳು ತುಂಬಿದ ಸಂಭ್ರಮ. ಅಮೃತ ಮಹೋತ್ಸವಕ್ಕೆ ಹತ್ತಿರದಲ್ಲಿರುವ ಕರ್ನಾಟಕ ವಿಧಾನಸಭೆ ಈಗಾಗಲೆ ಬೆಳ್ಳಿ ಹಬ್ಬ ಮತ್ತು ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡಿದೆ. ಈಗ ವಿಧಾನಸಭೆ ನಡೆಯುವುದಕ್ಕೆ ಕೆಂಗಲ್ ಹನುಮಂತಯ್ಯ ಕಟ್ಟಿಸಿದ ಕಲ್ಲಿನ ವಿಧಾನಸೌಧವಿದೆ. ಆದರೆ, ಅಂದು ಅಧಿವೇಶನ ನಡೆಸುವುದಕ್ಕೆ ಸೂಕ್ತವಾದ ಸ್ಥಳ ಇರಲಿಲ್ಲ. ಮಹಾರಾಜರ ಕಾಲದಲ್ಲಿದ್ದ ಪ್ರಜಾಪ್ರತಿನಿಧಿಗಳ ಸಭೆಗಳು ಮೈಸೂರಿನಲ್ಲಿ ನಡೆಯುತ್ತಿದ್ದವು. ಸ್ವಾತಂತ್ರ್ಯ ಬಂದ ಮೇಲೆ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂತು. ನಾಡಿನ ಮೊದಲ ಮುಖ್ಯಮಂತ್ರಿಯಾದ ಹೆಗ್ಗಳಿಕೆ ಕೆ.ಸಿ. ರೆಡ್ಡಿ ಅವರದ್ದು. 1949ರ ಡಿಸೆಂಬರ್ 16ರಂದು ಮೈಸೂರು ಮಹಾರಾಜರು ಪ್ರತಿನಿಧಿ ಮತ್ತು ಶಾಸಕಾಂಗ ಸಭೆಯನ್ನು ವಿಸರ್ಜಿಸಿದರು. 1947ರಲ್ಲಿ ರಚಿತವಾದ ಸಂವಿಧಾನ ರಚನಾ ಸಭೆಯು 1952ರಲ್ಲಿ ಚುನಾವಣೆ ನಡೆಯುವವರೆಗೆ ಮೈಸೂರಿನ ಹಂಗಾಮಿ ಅಸೆಂಬ್ಲಿಯಾಗಿ ಮಾರ್ಪಾಟಾಗಿತ್ತು.
ಸ್ಪೀಕರ್ ಸ್ಥಾನಕ್ಕೂ ಸ್ಪರ್ಧೆ: ವಿಧಾನಸಭೆ ಸಮಾವೇಶಗೊಂಡ ಬಳಿಕ ಸ್ಪೀಕರ್ ಸ್ಥಾನಕ್ಕೆ ಸ್ಪರ್ಧೆ ಏರ್ಪಟ್ಟಿತ್ತು. ಸಮಾಜವಾದಿ ಮುಖಂಡ ಶಾಂತವೇರಿ ಗೋಪಾಲಗೌಡ ಮತ್ತು ಎಚ್. ಸಿದ್ದಯ್ಯ ನಡುವೆ ನಡೆದ ಸ್ಪರ್ಧೆಯಲ್ಲಿ ಎಚ್. ಸಿದ್ದಯ್ಯ 74 ಮತ ಪಡೆದು ಜಯಶಾಲಿಯಾದರು. ಆಗ ಅವರನ್ನು ಅಭಿನಂದಿಸಿ ಸಿಎಂ ಕೆಂಗಲ್ ಹನುಮಂತಯ್ಯ ಭಾಷಣ ಮಾಡಿದ್ದು ವಿಶೇಷ.
ಮೊದಲ ಅಧಿವೇಶನ: ಹೊಸದಾಗಿ ವಿಧಾನಸೌಧವನ್ನು ನಿರ್ಮಾಣ ಮಾಡಿದ ಬಳಿಕ ವಿಧಾನಸಭೆಯ ಮೊದಲ ಅಧಿವೇಶನವು 1956 ಡಿ.19ರಂದು ನಡೆಯಿತು.
ಜಂಟಿ ಅಧಿವೇಶನಗಳು: ಮೈಸೂರಿನ ಜಗನ್ಮೋಹನ ಪ್ಯಾಲೇಸ್, ಬೆಂಗಳೂರಿನ ಟೌನ್ ಹಾಲ್ ಮತ್ತು ಸಾರ್ವಜನಿಕ ಕಚೇರಿಗಳ ಕಟ್ಟಡ ಸಂಕೀರ್ಣ ಸಭಾಂಗಣದಲ್ಲಿ ವಿಧಾನಸಭೆಯ ಜಂಟಿ ಅಧಿವೇಶನ ನಡೆಸಿರುವುದು ವಿಶೇಷ.