ಜಿಲ್ಲೆ

ರಾಜ್ಯದಲ್ಲಿ ಶೇ.61ರಷ್ಟು ವಾಡಿಕೆಗಿಂತ ಅಧಿಕ ಮಳೆ

ಹರೀಶ್​​ ಕೆ.ಸಿ.

ಬೆಂಗಳೂರು: ಈ ಬಾರಿ ಹಿಂಗಾರು ಅಬ್ಬರಿಸಿದ್ದು,ಅ.1ರಿಂದ ಅ.24ರವರೆಗೆ ರಾಜ್ಯಾದ್ಯಂತ 111 ಮಿಮೀ ಬದಲಾಗಿ 179 ಮಿಮೀ ಸುರಿದಿದ್ದು ವಾಡಿಕೆಗಿಂತ ಶೇ.61ರಷ್ಟು ಅಧಿಕ ಮಳೆಯಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ವಾಡಿಕೆಗಿಂತ ಅಧಿಕ ಮಳೆ ಸುರಿದಿರುವುದು ಗಮನಾರ್ಹ. 2023ರ ಅ.1ರಿಂದ ಅ.24ರವರೆಗೆ 100 ಮಿಮೀ ಮಳೆಯಾಗುವ ಬದಲು 40 ಮಿಮೀ ಸುರಿದಿದ್ದು, ಶೇ.60ರಷ್ಟು ಮಳೆ ಕೊರತೆಯಾಗಿತ್ತು.

ಮುಂಗಾರು ಮುಗಿದ ಬೆನ್ನಲ್ಲೇ ಅ.1ರಿಂದ ಆರಂಭವಾದ ಹಿಂಗಾರು, ನಾಲ್ಕು ವಾರಗಳ ರಾಜ್ಯಾದ್ಯಂತ ಉತ್ತಮ ಮಳೆಯಾಯಿತು. 2024ರ ಅ.1ರಿಂದ ಅ.24ರವರೆಗೆ 16 ಜಿಲ್ಲೆಗಳಲ್ಲಿ ವಾಡಿಕೆಗಿಂತ ಅತಿ ಹೆಚ್ಚು, 5 ಜಿಲ್ಲೆಗಳಲ್ಲಿ ಹೆಚ್ಚು ಮತ್ತು 9 ಜಿಲ್ಲೆಗಳಲ್ಲಿ ವಾಡಿಕೆಯಷ್ಟೇ ಮಳೆ ಸುರಿದಿದೆ. ರಾಯಚೂರಿನಲ್ಲಿ ಮಾತ್ರ ಮಳೆ ಅಭಾವ ಉಂಟಾಗಿತ್ತು. ದಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ವಾಡಿಕೆಯಂತೆ 113 ಮಿಮೀ ಮಳೆಯಾಗಬೇಕಿತ್ತು. ಆದರೆ, 213 ಮಿಮೀ ಸುರಿದಿದ್ದು, ಶೇ.89ರಷ್ಟು ವಾಡಿಕೆಗಿಂತ ಅಧಿಕ ಸುರಿದಿದೆ. ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ 94 ಮಿಮೀ ಮಳೆ ಬದಲಾಗಿ 128 ಮಿಮೀ ಬಿದ್ದಿದ್ದು, ಶೇ.36ರಷ್ಟು ವಾಡಿಕೆಗಿಂತ ಅಧಿಕ ವರ್ಷಧಾರೆಯಾಗಿದೆ. ಮಲೆನಾಡು ಜಿಲ್ಲೆಗಳಲ್ಲಿ 132 ಮಿಮೀ ಮಳೆಯಾಗಬೇಕಿತ್ತು. ಆದರೆ, 229 ಮಿಮೀ ಸುರಿದಿದ್ದು, ವಾಡಿಕೆಗಿಂತ ಶೇ.56ರಷ್ಟು ಹೆಚ್ಚು ಸುರಿದಿದೆ. ಕರಾವಳಿಯಲ್ಲಿ 158 ಮಿಮೀ ಮಳೆಯಾಗುವ ಬದಲು 247 ಮಿಮೀ ಸುರಿದಿದ್ದು, ವಾಡಿಕೆಗಿಂತ ಶೇ. 56ರಷ್ಟು ಹೆಚ್ಚು ಬಿದ್ದಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿರುವ ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಎಲ್ಲೆಲ್ಲಿ ಹೆಚ್ಚು ಮಳೆ?

ದಾವಣಗೆರೆ, ಬೆಂಗಳೂರು ನಗರ, ವಿಜಯನಗರ, ಬೆಳಗಾವಿ, ಹಾವೇರಿ, ಧಾರವಾಡ, ಶಿವಮೊಗ್ಗ, ಬೆಂ.ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ,ಹಾಸನ, ಚಿಕ್ಕಮಗಳೂರು, ಮಂಡ್ಯ, ಉತ್ತರ ಕನ್ನಡ, ಗದಗದಲ್ಲಿ ವಾಡಿಕೆಗಿಂತ ಅತಿ ಹೆಚ್ಚು ಮಳೆ ಬಿದ್ದಿದೆ. ಚಾಮರಾಜನಗರ, ಮೈಸೂರು, ಬಳ್ಳಾರಿ, ದಣ ಕನ್ನಡ, ಉಡುಪಿಯಲ್ಲಿ ವಾಡಿಕೆಗಿಂತ ಹೆಚ್ಚು ವರ್ಷಧಾರೆಯಾಗಿದೆ. ವಿಜಯಪುರ, ಬೀದರ್​, ಯಾದಗಿರಿ, ಕಲಬುರಗಿ, ಬಾಗಲಕೋಟೆ, ಕೊಡಗು, ದಣ ಕನ್ನಡ, ಕೊಪ್ಪಳದಲ್ಲಿ ವಾಡಿಕೆಯಷ್ಟೇ ಸುರಿದಿದೆ. 104 ತಾಲೂಕುಗಳಲ್ಲಿ ಅತಿ ಹೆಚ್ಚು, 49 ತಾಲೂಕುಗಳಲ್ಲಿ ಹೆಚ್ಚು, 55 ತಾಲೂಕುಗಳಲ್ಲಿ ವಾಡಿಕೆಯಷ್ಟೇ ಸುರಿದರೆ, 27 ತಾಲೂಕುಗಳಲ್ಲಿ ಮಳೆ ಅಭಾವ ಉಂಟಾಗಿದೆ.