ಜಿಲ್ಲೆ

60ರ ವೃದ್ಧನಿಂದ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಯತ್ನ; ಬಾಲಕಿಗೆ ಚಿಕಿತ್ಸೆ, ಆರೋಪಿ ಪೊಲೀಸ್ ವಶಕ್ಕೆ...

ಕೋಲಾರ: ಅರವತ್ತು ವರ್ಷದ ಮುದುಕನೊಬ್ಬ ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಕೋಲಾರದ ಗ್ರಾಮವೊಂದರಲ್ಲಿ ಈ ಪ್ರಕರಣ ನಡೆದಿದ್ದು, ಗ್ರಾಮಾಂತರ ಠಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇಲ್ಲಿನ ಗ್ರಾಮ ಪಂಚಾಯತ್​ವೊಂದರ ಸದಸ್ಯ ಕುಮಾರ್ ಎಂಬಾತನ ತಂದೆ ತಿಮ್ಮಪ್ಪ ಆರೋಪಿ. ಬುಧವಾರ ಬಾಲಕಿಯ ತಾಯಿ ಕೆಲಸಕ್ಕೆ ಹೋಗಿದ್ದಾಗ, ಬಾಲಕಿಗೆ ಚಾಕಲೇಟ್ ಆಮಿಷವೊಡ್ಡಿದ ಮುದುಕ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬಾಲಕಿಯ ತಾಯಿ ಮರಳಿದ ಬಳಿಕ ವಿಷಯ ಗೊತ್ತಾಗಿದೆ.

ಆರೋಪಿಯ ಪುತ್ರ, ಗ್ರಾಮ ಪಂಚಾಯತ್ ಸದಸ್ಯನೂ ಆಗಿರುವ ಕುಮಾರ್ ಈ ಬಗ್ಗೆ ಪೊಲೀಸರಿಗೆ ದೂರು ನೀಡದಂತೆ ಬಾಲಕಿಯ ಮನೆಯವರಿಗೆ ಬೆದರಿಕೆಯನ್ನೂ ಒಡ್ಡಿದ್ದಾನೆ ಎನ್ನಲಾಗಿದೆ. ಬಾಲಕಿಯ ತಾಯಿ ಈ ಪ್ರಕರಣ ಸಂಬಂಧ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಮತ್ತೊಂದೆಡೆ ಬಾಲಕಿಯನ್ನು ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ