ಜಿಲ್ಲೆ

ನಂಬರ್​ ಪ್ಲೇಟ್​ ನಕಲು ಪ್ರಕರಣ; ಅಂತರಾಜ್ಯ ಖದೀಮರ ಬಂಧನ

Webdesk - Manjunatha B

ಬೆಂಗಳೂರು: ವಿಧಾನಪರಿಷತ್ ಸದಸ್ಯ ಭೋಜೇಗೌಡ ಅವರ ಕಾರಿನ ನಕಲಿ ನಂಬರ್ ಪ್ಲೇಟ್ ಬಳಸಿ ಐಷಾರಾಮಿ ಕಾರು ಮಾರಾಟ ಮಾಡಲು ಯತ್ನಿಸಿದ ಆರೋಪದ ಮೇಲೆ ಹೈಗ್ರೌಂಡ್ಸ್​ ಠಾಣೆ ಪೊಲೀಸರು ಆರು ಮಂದಿ ಅಂತರಾಜ್ಯ ಖದೀಮರನ್ನು ಬಂಧಿಸಿದ್ದಾರೆ.

ಶಿವಾಜಿನಗರ ನಿವಾಸಿ ನಸೀಬ್(38), ಅಟ್ಟೂರು ಲೇಔಟ್‌ನ ಮಂಜುನಾಥ್(45), ಮೈಸೂರಿನ ಶಾಭಾಯ್ ಖಾನ್(31), ಫ್ರೆಜರ್‌ಟೌನ್ ನಿವಾಸಿ ಸೈಯದ್ ರಿಯಾಝ್ (34), ಬಾಗಲೂರು ನಿವಾಸಿ ಇಮ್ರಾನ್(34), ಸಾರಾಯಿಪಾಳ್ಯ ನಿವಾಸಿ ನಯಾಜ್ ಖಾನ್(32) ಬಂಧಿತರು.

ಐಷಾರಾಮಿ ಕಾರುಗಳು ವಶಕ್ಕೆ

ಬಂಧಿತ ಆರೋಪಿಗಳಿಂದ ಸುಮಾರು ೩ ಕೋಟಿಗೂ ಅಧಿಕ ಮೌಲ್ಯದ ಎಂಟು ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಹಿಂದೆ ಇದೇ ಪ್ರಕರಣದಲ್ಲಿ ಮಂಜುನಾಥ್ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು ಎಂದು ಪೊಲೀಸ್​​ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ಹಿನ್ನಲೆ

ಫೆಬ್ರವರಿ 22ರಂದು ವಿಧಾನಪರಿಷತ್​ ಸದಸ್ಯ ಭೋಜೇಗೌಡ ಬಳಸುವ ಕಾರಿನ ನಂಬರ್ ಪ್ಲೇಟ್ (KA-18-Z-5977) ಕ್ವೀನ್ಸ್ ರಸ್ತೆಯ ಹ್ಯಾಂಡ್ ಐ-ಕಾರು ಶೋರಂ ಮುಂಭಾಗ ನಿಂತಿರುವುದನ್ನು ಅವರ ಆಪ್ತ ಸಹಾಯಕ ಮಾದೇಶ್ ಗಮನಿಸಿದ್ದಾರೆ.

ಕೂಡಲ್ಲೇ ಶೋ ರೂಂನ ಸಿಬ್ಬಂದಿಯನ್ನು ವಿಚಾರಿಸಿ ಗಾಡಿಗೆ ಸಂಬಂಧಪಟ್ಟ ದಾಖಲಾತಿಗಳನ್ನು ಪರಿಶೀಲಿಸಿ ಆಪ್ತ ಸಹಾಯಕ ಮಾದೇಶ್​ ಭೋಜೇಗೌಡರಿಗೆ ತಿಳಿಸಿದ್ದಾರೆ. ಕೂಡಲ್ಲೇ ಎಚ್ಚೆತ್ತ ಭೋಜೇಗೌಡ ಹಯಗ್ರೌಂಡ್ಸ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ಧಾರೆ.

ಅಂತರಾಜ್ಯ ಕಳ್ಳರ ಬಂಧನ

ದೂರಿನ ಹಿನ್ನಲೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳಿಗೆ ಬೃಹತ್​ ಜಾಲದ ನಂಟಿರುವುದು ತಿಳಿದು ಬಂದಿದೆ. ಮನೆ ಮುಂದೆ ಅಥವಾ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಫಾರ್ಚೂನರ್, ಇನೋವಾ ಸೇರಿ ಐಷಾರಾಮಿ ಕಾರುಗಳನ್ನು ಗುರುತಿಸಿ ಕೆಲ ತಂತ್ರಜ್ಞಾನ ಬಳಸಿ ಲಾಕ್ ತೆರೆದು ಕಳವು ಮಾಡುತ್ತಿದ್ದರು.

ಬಳಿಕ ಅವುಗಳಿಗೆ ನಕಲಿ ನಂಬರ್ ಪ್ಲೇಟ್‌ಗಳನ್ನು ಅಳವಡಿಸುತ್ತಿದ್ದರು. ಬಳಿಕ ಗ್ಯಾರೆಜ್‌ಗೆ ಕೊಂಡೊಯ್ದು ಇಂಜಿನ್ ಮತ್ತು ಚಾರ್ಸಿ ನಂಬರ್ ಬದಲಾಯಿಸಿ ಕೇರಳ, ಮಹಾರಾಷ್ಟ್ರ, ರಾಜಸ್ಥಾನ, ದೆಹಲಿ, ಪಂಜಾಬ್, ಆಂಧ್ರಪ್ರದೇಶ, ತೆಲಂಗಾಣ ಭಾಗದಲ್ಲಿ ಮಾರಾಟ ಮಾಡುತ್ತಿದ್ದರು.

ಈ ಕಾರುಗಳನ್ನು ಸೆಕೆಂಡ್ ಹ್ಯಾಂಡ್ ಶೋರೂಮ್‌ಗೆ ಮಾರಾಟ ಮಾಡುತ್ತಿರಲಿಲ್ಲ. ಬದಲಿಗೆ ಸೆಕೆಂಡ್ ಹ್ಯಾಂಡ್ ಡೀಲರ್‌ಗಳಿಗೆ ಮಾರಾಟ ಮಾಡುತ್ತಿದ್ದರು ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.