ಜಿಲ್ಲೆ

ರಾಜ್ಯದಲ್ಲಿ 500 ಹೀಟ್​ವೇವ್​ ಕೇಸ್​: ಇಬ್ಬರು ಮೃತ

ಹರೀಶ್​​ ಕೆ.ಸಿ.

ಬೆಂಗಳೂರು: ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ವಾಡಿಕೆಗಿಂತ 2-3 ಡಿಗ್ರಿ ಸೆಲ್ಸಿಯಸ್​ ಉಷ್ಣಾಂಶ ಹೆಚ್ಚಳವಾಗಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದ್ದ ಬೆನ್ನಲ್ಲೇ ಬಿಸಿಲಿನ ಪ್ರಖರತೆಗೆ ರಾಜ್ಯಾದ್ಯಂತ 500 ಹೀಟ್​ವೇವ್​ ಕೇಸ್​ ದಾಖಲಾಗಿದೆ. ಬಾಗಲಕೋಟೆ ಮತ್ತು ಕಲಬುರಗಿಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

ಮಾ.1ರಿಂದ ಏ.3ರವರೆಗೆ ಚಿಕ್ಕಬಳ್ಳಾಪುರ 102, ಬಾಗಲಕೋಟೆ 69, ಚಿತ್ರದುರ್ಗ 56, ಮಂಡ್ಯ 54 ಸೇರಿ ರಾಜ್ಯದಲ್ಲಿ 500 ಹೀಟ್​ವೇವ್​ ಕೇಸ್​ ದಾಖಲಾಗಿದೆ. ಬೆಂಗಳೂರು ಸೇರಿ ರಾಜ್ಯದ ಕೆಲವೆಡೆ ಬಿಸಿಲು ಹೆಚ್ಚಳವಾದರೂ ಈವರೆಗೆ ಹೀಟ್​ವೇವ್​ ಕೇಸ್​ ವರದಿಯಾಗಿಲ್ಲ. ಗರಿಷ್ಠ ತಾಪಮಾನದಲ್ಲಿ 40 ಡಿಗ್ರಿಗಿಂತ ಹೆಚ್ಚು ಉಷ್ಣಾಂಶ ದಾಖಲಾದರೆ ಶಾಖ ತರಂಗ (ಹೀಟ್​ವೇವ್​) ಸ್ಥಿತಿವೆಂದು ಪರಿಗಣಿಸಲಾಗುತ್ತದೆ. ಬದಾಮಿ, ಬಾಗಲಕೋಟೆ, ಗದಗ, ಗಂಗಾವತಿ, ಕಲಬುರಗಿ, ಕೋನೆಹಳ್ಳಿ, ರಾಯಚೂರು ಮತ್ತು ವಿಜಯಪುರ ಸೇರಿ ರಾಜ್ಯದ ಇತರೆ ಕಡೆಗಳಲ್ಲಿ 40-42 ಡಿ.ಸೆ.ಉಷ್ಣಾಂಶ ದಾಖಲಾಗುತ್ತಿದೆ. ಹಾಗಾಗಿ, ಹಗಲಿನ ವೇಳೆ ರಣ ಬಿಸಿಲು ಇರುವುದರಿಂದ ಹೊರಗಡೆ ಓಡಾಡುವಾಗ ಎಚ್ಚರವಹಿಸುವಂತೆ ಇಲಾಖೆ ಸಲಹೆ ಕೊಟ್ಟಿದೆ.

2,500 ಮಂದಿ ಮೃತ

ತಾಪಮಾನ ಹೆಚ್ಚಳದಿಂದಾಗಿ ಜನರಿಗೆ ಊತ, ತಲೆನೋವು, ವಾಕರಿಕೆ, ರ್ನಿಜಲೀಕರಣ, ಸುಸ್ತು, ವಾಂತಿ ಮತ್ತು ಬೆವರು ಸೇರಿ ಇತರೆ ಆರೋಗ್ಯ ಸಮಸ್ಯೆ ಬರಲಿವೆ. ಜತೆಗೆ, ಜ್ವರ (102 ಡಿಗ್ರಿ) ಕಾಣಿಸಿಕೊಳ್ಳಬಹುದು. ತೀವ್ರವಾದ ಜ್ವರ (104 ಡಿಗ್ರಿ) ಬಂದರೆ ಪ್ರಜ್ಞೆ ಬೀಳುವ ಅಪಾಯ ಜತೆಗೆ ಕೋಮಾಕ್ಕೂ ಹೋಗಿ ಪ್ರಾಣ ಕಳೆದುಕೊಳ್ಳಬಹುದು. ಕಳೆದ 10 ವರ್ಷಗಳಲ್ಲಿ ಆಂಧ್ರಪ್ರದೇಶ, ತೆಲಂಗಾಣದಲ್ಲಿ ಅಧಿಕ ತಾಪಮಾನದಿಂದ 2,500 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ವಯಸ್ಸಾದವರು ಹೆಚ್ಚು ಪ್ರಾಣ ಕಳೆದುಕೊಂಡಿದ್ದಾರೆ. ಕರ್ನಾಟಕದಲ್ಲಿ ಅಷ್ಟೇನೂ ಸಾವು ನೋವು ಸಂಭವಿಸದಿದ್ದರೂ ಹಲವು ಜಿಲ್ಲೆಗಳು ಶಾಖದ ಅಲೆಗೆ ತುತ್ತಾಗುತ್ತಿವೆ. ಆದರೆ, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಬಳಿ ಈವರೆಗೆ ದಾಖಲಾಗಿರುವ ಹೀಟ್​ವೇವ್​ ಕೇಸ್​ಗಳು ಬಗ್ಗೆ ಮಾಹಿತಿ ಇಲ್ಲ.

ಶೇ.50 ಮಳೆ ಕುಂಠಿತ

ಕಳೆದ ವರ್ಷ ತೀವ್ರ ಮಳೆ ಕೊರತೆಯಿಂದ ಭೀಕರ ಬರಗಾಲದಿಂದಾಗಿ ತತ್ತರಿಸಿರುವ ರಾಜ್ಯದಲ್ಲಿ ಮೂರು ತಿಂಗಳು ಮಳೆ ಬಿದ್ದಿಲ್ಲ. 2024ರ ಜನವರಿಯಿಂದ ಏಪ್ರಿಲ್​ 4ರವರೆಗೆ ವಾಡಿಕೆಯಂತೆ 17 ಮಿಮೀ ಮಳೆಯಾಗಬೇಕಿತ್ತು. ಆದರೆ, 9 ಮಿಮೀ ಮಳೆ ಸುರಿದಿದ್ದು, ಶೇ.50 ಅಭಾವ ಉಂಟಾಗಿದೆ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಮಳೆ ಕೊರತೆ ಎದುರಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿರುವ ಅಂಕಿಅಂಶಗಳಿಂದ ತಿಳಿದುಬಂದಿದೆ. ಕೆಲವೆಡೆ ಮಾತ್ರ ಸಾಧಾರಣ ಮಳೆ ಸುರಿದರೆ ಉಳಿದೆಡೆ ಹನಿಯೂ ಬಿದ್ದಿಲ್ಲ. ಹಾಗಾಗಿ, ದಿನದಿಂದ ದಿನಕ್ಕೆ ಕರೆ, ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರು ಬರಿದಾಗಿದೆ. ಎಲ್​ ನಿನೋ' ಪ್ರಭಾವ ತಗ್ಗಿದರೆ ಏಪ್ರಿಲ್​ ಮತ್ತು ಮೇನಲ್ಲಿ ಉತ್ತಮ ವರ್ಷಧಾರೆ ಸುರಿಯುವ ಸಾಧ್ಯತೆ ಇದೆ.

ಶುಕ್ರವಾರ ಉಷ್ಣಾಂಶ ದಾಖಲಾದ ವಿವರ

ಜಿಲ್ಲೆ                  ತಾಪಮಾನ

ಯಾದಗಿರಿ            44.3

ಕಲಬುರಗಿ             42.8

ತುಮಕೂರು           42.2

ಕೊಪ್ಪಳ               40.8

ಬಳ್ಳಾರಿ               40.8

ಗದಗ                 40.6

ಹಾವೇರಿ              39.4

ಬೀದರ್​               39.2

ದಾವಣಗೆರೆ           39.5

ಶಿವಮೊಗ್ಗ             38.8

ಮಂಡ್ಯ                38.2