ಬೆಂಗಳೂರು:ಅನ್ನಭಾಗ್ಯ ಯೋಜನೆಯ ಉದ್ದೇಶ ಮತ್ತು ಮಹತ್ವ ಕುರಿತು ಪ್ರಚಾರಕ್ಕಾಗಿ ಪ್ರಸಕ್ತ ಸಾಲಿನಲ್ಲಿ ಆಹಾರ ಇಲಾಖೆ 5 ಕೋಟಿ ರೂ. ವೆಚ್ಚ ಮಾಡುತ್ತಿದೆ.
ಮಾಹಿತಿ, ಶಿಕ್ಷಣ ಮತ್ತು ಸಂವಹನ( ಐಇಸಿ) ಮೂಲಕ ಪ್ರಚಾರಕ್ಕಾಗಿ ಇಲಾಖೆ, ಸರ್ಕಾರಕ್ಕೆ ಸಲ್ಲಿಸಿದ್ದ 80 ಕೋಟಿ ರೂ. ಪ್ರಸ್ತಾವನೆ ಪೈಕಿ 2024-25ರ ಸಾಲಿನ ಆಯವ್ಯಯದಲ್ಲಿ 5 ಕೋಟಿ ರೂ. ಬಿಡುಗಡೆಯಾಗಿದ್ದು, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆ( ಕೆಟಿಪಿಪಿ) ಅನ್ವಯ ಪ್ರಸಕ್ತ ಸಾಲಿನ ಐಇಸಿ ಚಟುವಟಿಕೆಗಳಿಗೆ ಅನುದಾನ ಬಳಕೆಯಾಗುತ್ತಿದೆ. ಯೋಜನೆಯ ಉದ್ದೇಶ ಕುರಿತು ಜನರಿಗೆ ಅರಿವು ಮೂಡಿಸಲು, ನೈಜ ಫಲಾನುಭವಿಗಳಿಗೆ ಸಮರ್ಪಕವಾಗಿ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಇಲಾಖೆ, ರಾಜ್ಯಾದ್ಯಂತ ವ್ಯಾಪಕ ಪ್ರಚಾರ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಮುದ್ರಣ, ದೃಶ್ಯ ಮಾಧ್ಯಮ, ರೇಡಿಯೋ, ಹೋರ್ಡಿಂಗ್ಸ್, ವಿಡಿಯೋ ಕ್ಲಿಪಿಂಗ್ಸ್, ಸಾಮಾಜಿಕ ಜಾಲತಾಣ, ಡಿಜಿಟಲ್ ವಾಲ್ ಪೇಟಿಂಗ್ಸ್, ಕೇಬಲ್ ಟಿವಿ, ಸ್ಟ್ರೀಟ್ ಪ್ಲೇ ಪೋಸ್ಟರ್, ರೈಲ್ವೆ, ಬಸ್, ಮೆಟ್ರೋ ನಿಲ್ದಾಣದಲ್ಲಿ ಡಿಜಿಟಲ್ ಸ್ಕ್ರೀನ್ ಹಾಗೂ ಬಸ್, ಆಟೋ ಹಿಂಭಾಗದಲ್ಲಿ ಯೋಜನೆ ಮಾಹಿತಿ ಕುರಿತು ಪ್ರಚಾರ ಮಾಡಲಾಗುತ್ತಿದೆ.
ಬಡವರ ಹಸಿವು ನೀಗಿಸುತ್ತಿದ್ದ ಅನ್ನಭಾಗ್ಯ ಯೋಜನೆ, 2013ರ ಜುಲೈನಿಂದ ರಾಜ್ಯದಲ್ಲಿ ಅನುಷ್ಠಾನಕ್ಕೆ ಬಂದಿದೆ. ಯೋಜನೆ ಜಾರಿಯಿಂದಾಗಿ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಕೇಂದ್ರದ ಸಹಕಾರದೊಂದಿಗೆ ರಾಜ್ಯ ಸರ್ಕಾರ, 2013ರ ಜುಲೈನಿಂದ 2023ರ ಜು.10ರವರೆಗೆ ಬಿಪಿಎಲ್, ಅಂತ್ಯೋದಯ ಕಾರ್ಡ್ದಾರರಿಗೆ ಉಚಿತವಾಗಿ ಪಡಿತರ ವಿತರಣೆಯಾಗುತ್ತಿತ್ತು. ಎಪಿಎಲ್ ಕಾರ್ಡ್ಗಳಿಗೆ ಪ್ರತಿ ಕೆಜಿ 15 ರೂ.ನಂತೆ 10 ಕೆಜಿ ಅಕ್ಕಿ ವಿತರಿಸಲಾಗುತ್ತಿತ್ತು. ಆದರೆ, 2023ರ ಜು.10ರಿಂದ ಈ ಯೋಜನೆಯಡಿ ಅಕ್ಕಿ ಬದಲು ಕಾರ್ಡ್ದಾರರಿಗೆ ಹಣ ಪಾವತಿಸಲಾಗುತ್ತಿದೆ. ಕಳೆದ ವರ್ಷದಿಂದ ಅಕ್ಕಿ ವಿತರಣೆ ಯೋಜನೆ ಜವಾಬ್ದಾರಿಯನ್ನು ಕೇಂದ್ರ ಸರ್ಕಾರವೇ ವಹಿಸಿಕೊಂಡು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ, ರಾಜ್ಯದ 1.02 ಕೋಟಿ ಬಿಪಿಎಲ್ ಚೀಟಿಗಳಿಗಳಿಗೆ ಹಾಗೂ 10.80 ಲಕ್ಷ ಅಂತ್ಯೋದಯ ಕಾರ್ಡ್ಗಳಿಗೆ ಉಚಿತವಾಗಿ ಅಕ್ಕಿ ವಿತರಿಸಲಾಗುತ್ತಿದೆ. ಅಲ್ಲದೆ, ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ (ಎನ್ಎ್ಎಸ್ಎ)ಗಿಂತ ಹೆಚ್ಚು ಇರುವ ಬಿಪಿಎಲ್ ಕಾರ್ಡ್ಗಳಿಗೆ (14,47,582), ರಾಜ್ಯ ಸರ್ಕಾರ, ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸಿ ಫಲಾನುಭವಿಗಳಿಗೆ ಉಚಿತವಾಗಿ ವಿತರಿಸುತ್ತಿದೆ.