ಕೂಡ್ಲಿಗಿ ತಾಲೂಕು ಕಚೇರಿ.  
ಜಿಲ್ಲೆ

3ನೇ ಮಹಡಿಯಲ್ಲಿ ಆಹಾರ ಇಲಾಖೆ ಕಚೇರಿ, ಅಂಗವಿಕಲರು, ವೃದ್ಧರಿಗೆ ಕಷ್ಟ

ನರೇಶ್ ಕುಮಾರ್

ಕೂಡ್ಲಿಗಿ: ತಾಲೂಕು ಆಡಳಿತ ಸೌಧದ ಮೂರನೇ ಮಹಡಿಯಲ್ಲಿರುವ ಆಹಾರ ಇಲಾಖೆ ಕಚೇರಿಗೆ ಶುಕ್ರವಾರ ಪಡಿತರ ಚೀಟಿಗೆ ಸಂಬಂಧಿಸಿದಂತೆ ವಿಚಾರಿಸಲು ಬಂದ ವೃದ್ಧೆಯೊಬ್ಬರು ಮೆಟ್ಟಿಲು ಹತ್ತುವಾಗ ಜಾರಿಬಿದ್ದಿದ್ದಾರೆ. ನೆಲಮಹಡಿಗೆ ಕಚೇರಿ ಸ್ಥಳಾಂತರಿಸುವಂತೆ ಹಲವು ಸಲ ಮನವಿ ಮಾಡಿದರೂ ತಹಸೀಲ್ದಾರ್ ಕಡೆಗಣಿಸಿದ್ದರಿಂದ ಈ ಘಟನೆಗೆ ಕಾರಣ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಹಾರ ಇಲಾಖೆ ತಾಲೂಕು ಕಚೇರಿಯ ಮೂರನೇ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರಿಂದ ವೃದ್ಧರು, ಅಂಗವಿಕಲರು ಮೆಟ್ಟಿಲುಗಳನ್ನು ಹತ್ತಿ ಹೋಗಿ ಕೆಲಸ ಮುಗಿಸಿಕೊಂಡು ಬರಲು ಕಷ್ಟವಾಗುತ್ತಿದೆ. ಸರ್ಕಾರ ಬಡಜನರಿಗೆ ಅನೇಕ ಯೋಜನೆಗಳನ್ನು ನೀಡಿದ್ದು, ಸದುಪಯೋಗ ಪಡೆಯಲು ನೂರಾರು ಜನರು ದೂರದ ಗ್ರಾಮಗಳಿಂದ ಬರುತ್ತಾರೆ. ಅದರಲ್ಲೂ ವೃದ್ಧರು, ಅಂಗವಿಕಲರಿಗೆ ಬಹಳ ತೊಂದರೆಯಾಗಿದೆ.

ಶುಕ್ರವಾರ ವೃದ್ಧೆಯೊಬ್ಬರು ಪಡಿತರ ಚೀಟಿಗೆ ಸಂಬಂಧಿಸಿದಂತೆ ಮಾಹಿತಿ ಕೇಳಲು ಮೆಟ್ಟಿಲು ಹತ್ತುವಾಗ ಆಯತಪ್ಪಿ ಬಿದ್ದಿದ್ದಾರೆ. ಅಲ್ಲಿದ್ದವರು ತಕ್ಷಣ ಬಂದು ಮೇಲೆತ್ತಿ ಕೂರಿಸಿದ್ದಾರೆ. ಇಂತಹ ಸಣ್ಣ ಪುಟ್ಟ ಅನಾಹುತಗಳು ಆಗಾಗ ನಡೆಯುತ್ತಿರುತ್ತವೆ. ಈ ಬಗ್ಗೆ ಸ್ಥಳೀಯರಾದ ಎಂ.ವೆಂಕಟೇಶ್, ಸಿ.ಬಿ.ಗುರುರಾಜ, ವಿ.ಪ್ರಕಾಶ ಇತರರು, ತಹಸೀಲ್ದಾರ್ ಟಿ.ಜಗದೀಶ್‌ಗೆ ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ.

‘ಸರ್ಕಾರ ನಿಗದಿ ಮಾಡಿದಂತೆ ಆಯಾ ಇಲಾಖೆಗಳಿಗೆ ಕಚೇರಿಗಳನ್ನು ನೀಡಿದ್ದು, ಈಗ ಉಳಿದಿರುವ ನನ್ನ ಕೊಠಡಿಯಷ್ಟೇ. ಅದನ್ನೇ ಬಿಟ್ಟು ಕೊಡಬೇಕಾ’ ಎನ್ನುತ್ತಾರೆ ಎಂದು ದೂರಿದ್ದಾರೆ.

ಈ ಕೂಡಲೇ ಜಿಲ್ಲಾಧಿಕಾರಿ, ಆಹಾರ ಇಲಾಖೆ ಕಚೇರಿಯನ್ನು ಕೆಳ ಮಹಡಿಗೆ ಸ್ಥಳಾಂತರಿಸಿ ವೃದ್ಧರು, ಅಂಗವಿಕಲರಿಗೆ ಅನುಕೂಲ ಕಲ್ಪಿಸಬೇಕು ಎಂದು ಪಪಂ ಸದಸ್ಯರಾದ ಸಚಿನ್‌ಕುಮಾರ್, ಕೆ.ಈಶಪ್ಪ, ಬಾಸೂ ನಾಯ್ಕ, ಜುಬೇರ್, ಗ್ಯಾಸ್ ವೆಂಕಟೇಶ್, ಕಡ್ಡಿ ಮಂಜುನಾಥ ಮತ್ತಿತರರು ಕೋರಿದ್ದಾರೆ.

ಪಡಿತರ ಚೀಟಿ-ಇತರ ಮಾಹಿತಿಗಾಗಿ ಅಂಗವಿಕಲರು, ವೃದ್ಧರು ಬರುತ್ತಾರೆ. ಕಚೇರಿ ಮೂರನೇ ಮಹಡಿಯಲ್ಲಿ ಇರುವುದರಿಂದ ಹತ್ತಿ ಬರಲು ಕಷ್ಟವಾಗಿದೆ. ಕಟ್ಟಡದ ನಕಾಶಯಂತೆ ಮೂರನೇ ಮಹಡಿಯಲ್ಲಿ ಕಚೇರಿಗೆ ಅವಕಾಶ ನೀಡಲಾಗಿದೆ. ಕೆಳ ಮಹಡಿಯಲ್ಲಿ ಕೊಠಡಿ ನೀಡಿದರೆ ಜನರಿಗೆ ಅನುಕೂಲವಾಗಲಿದೆ.ಭರತ್ ರಾಠೋಡ್ಶಿರಸ್ತೇದಾರ್, ಆಹಾರ ಇಲಾಖೆ, ಕೂಡ್ಲಿಗಿ